ರಾಷ್ಟ್ರೀಯ ಹಿರಿಯರ ವಾಲಿಬಾಲ್: ಕರ್ನಾಟಕ ಗೆಲವಿನ ಶುಭಾರಂಭ

ಭಾರೀ ನಿರೀಕ್ಷೆಯೊಂದಿಗೆ ಆಯೋಜನೆಗೊಂಡಿರುವ 64ನೇ ರಾಷ್ಟ್ರೀಯ ಹಿರಿಯರ ವಾಲಿಬಾಲ್ ಪಂದ್ಯಾವಳಿ ಶನಿವಾರ ಆರಂಭಗೊಂಡಿತು. ಮೊದಲ ದಿನವೇ ತನ್ನ...
ಕರ್ನಾಟಕ, ರಾಜಸ್ಥಾನ
ಕರ್ನಾಟಕ, ರಾಜಸ್ಥಾನ

ಬೆಂಗಳೂರು: ಭಾರೀ ನಿರೀಕ್ಷೆಯೊಂದಿಗೆ ಆಯೋಜನೆಗೊಂಡಿರುವ 64ನೇ ರಾಷ್ಟ್ರೀಯ ಹಿರಿಯರ ವಾಲಿಬಾಲ್ ಪಂದ್ಯಾವಳಿ ಶನಿವಾರ ಆರಂಭಗೊಂಡಿತು. ಮೊದಲ ದಿನವೇ ತನ್ನ ಅಭಿಯಾನ ಆರಂಭಿಸಿದ ಕರ್ನಾಟಕ ಪುರುಷರ ತಂಡ, ರಾಜಸ್ಥಾನ ತಂಡದ ವಿರುದ್ಧ 3-1 ಗೇಮ್ ಗಳ ಅಂತರದಲ್ಲಿ ಜಯ ಸಾಧಿಸಿತು.

ಶ್ರೀಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಉತ್ತಮ ಆರಂಭ ತೋರಿದ ಕರ್ನಾಟಕ ತಂಡ, ಉತ್ತಮ ಹೋರಾಟ ತೋರಿತಾದರೂ ಮೊದಲ ಗೇಮ್ ನಲ್ಲಿ 23-25 ಅಂಕಗಳ ಅಂತರದಲ್ಲಿ ಪರಾಭವ ಹೊಂದಿತು. ಆದರೆ, ಆನಂತರ ಪುಟಿದೆದ್ದ ರಾಜ್ಯದ ಆಟಗಾರರು ಎರಡನೇ ಗೇಮ್ ನಲ್ಲಿ 28-26ರ ಅಂತರದಲ್ಲಿ ಜಯಭೇರಿ ಬಾರಿಸಿದರು. ಎರಡನೇ ಗೇಮ್ ನಲ್ಲಿ ಕೇವಲ ಎರಡೇ ಅಂಕಗಳಲ್ಲಿ ಸೋಲು ಕಂಡಿದ್ದ ರಾಜಸ್ಥಾನ, ಮೂರನೇ ಗೇಮ್ನಲ್ಲಿ ಪ್ಟಟು ಬಿಡದೇ ಆಟವಾಡಿತು. ಆದರೆ, ಕರ್ನಾಟಕವೂ ಸುಲಭವಾಗಿ ಮಣಿಯುವಂತಿರಲಿಲ್ಲ. ಎರಡನೇ ಗೇಮ್ನಲ್ಲಿ ಗೆದ್ದಿದ್ದ ಉತ್ಸಾಹ ಅದರ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತ್ತು. ಇದರ ಫಲವಾಗಿ, ಅದು ಉತ್ತಮವಾಗಿಯೇ ಪೈಪೋಟಿ ನಡೆಸಿತು. ಅತ್ತ, ರಾಜಸ್ಥಾನ ತಂಡದ ಕಡೆಯಿಂದಲೂ ಭಾರೀ ಪ್ರತಿರೋಧ ವ್ಯಕ್ತವಾಯಿತು.
 
ಆದರೂ, ಪಟ್ಟುಬಿಡದೇ ಆಟ ಮುಂದುವರಿಸಿದ ರಾಜ್ಯ ತಂಡ, ಮೂರನೇ ಗೇಮ್ನಲ್ಲಿ 25-23 ಅಂಕಗಳ ಅಂತರದಲ್ಲೇ ಗೆಲವು ಸಾಧಿಸಿತು. ಈ ಮೂಲಕ, ಎದುರಾಳಿಗಳಿಗಿಂತ ರಾಜ್ಯ ತಂಡವು 2-1 ಗೇಮ್ಗಳಿಂದ ಮುನ್ನಡೆ ಪಡೆದುಕೊಂಡಿತು. ಇನ್ನು, ನಾಲ್ಕನೇ ಗೇಮ್ನಲ್ಲಿಯೂ ಇತ್ತಂಡಗಳು ಗೆಲವಿಗಾಗಿ ಭಾರೀ ಸೆಣಸಾಟ ನಡೆಸಿದವು. ಈ ಜಿದ್ದಾಜಿದ್ದಿಯ ಹೋರಾಟದ ನಡುವೆ ವಿಜೃಂಭಿಸಿದ ರಾಜ್ಯ ತಂಡ ಮಿಂಚಿನ ಪ್ರದರ್ಶನ ನೀಡಿತು. ಒಂದು ಹಂತದಲ್ಲಿ ತಟಸ್ಥವಾದಂತೆ ಕಂಡು ಬಂದ ರಾಜಸ್ಥಾನದ ಆಟಗಾರರು ಕೈಚೆಲ್ಲಿದಂತೆ ಭಾಸವಾಯಿತು. ಅತ್ತ, ಶಿಸ್ತುಬದ್ಧ ಪ್ರದರ್ಶನ  ಮುಂದುವರಿಸಿದ ರಾಜ್ಯ ತಂಡ, ಈ ಗೇಮ್ನಲ್ಲಿ 25-20 ಅಂಕಗಳ ಅಂತರದ ಜಯ ಸಾಧಿಸಿತಲ್ಲದೆ, 3-1 ಗೇಮ್ಗಳ ಅಂತರದಲ್ಲಿ ಪಂದ್ಯದಲ್ಲೂ ಜಯಶಾಲಿಯಾಯಿತು.

ಮಹಾರಾಷ್ಟ್ರದ ವಿರುದ್ಧ ರೈಲ್ವೇಸ್‍ಗೆ ಗೆಲವು:
ರಾಷ್ಟ್ರೀಯ ವಾಲಿಬಾಲ್ ನಲ್ಲಿ ತನ್ನದೇ ಪ್ರಾಬಲ್ಯ ಹೊಂದಿರುವ ರೈಲ್ವೇಸ್ ತಂಡವೂ, ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಶನಿವಾರ ನಡೆದ ಮಹಿಳೆಯರ ವಿಭಾಗದ ಮೊದಲ ಪಂದ್ಯದಲ್ಲಿ, ರೈಲ್ವೇಸ್ ತಂಡ, ಮಹಾರಾಷ್ಟ್ರ ತಂಡವನ್ನು 3-0 ಗೇಮ್ಗಳ ಅಂತರದಲ್ಲಿ ಪರಾಭವಗೊಳಿಸಿತು. ಮೊದಲ ಗೇಮ್ನಲ್ಲಿ 25-19 ಅಂತರದಲ್ಲಿ ಜಯ ಸಾಧಿಸಿದ ರೈಲ್ವೇಸ್,  ನಂತರದ ಗೇಮ್ಗಳಲ್ಲಿ 25-18, 25-17 ಗೇಮ್ಗಳ ಅಂತರದಲ್ಲಿ ಜಯಿಸಿ, ವಿಜಯದ ನಗೆ ಬೀರಿತು. ಪಂದ್ಯಾಳಿಗೆ ವೈಭವದ ಚಾಲನೆ ಪಂದ್ಯಗಳಿಗೂ ಮುನ್ನ ಕಂಠೀರಣ ಕ್ರೀಡಾಂಗಣದಲ್ಲಿ ನಡೆದ ವೈಭವದ ಉದ್ಘಾಟನಾ ಸಮಾರಂಭದಲ್ಲಿ,  ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ದೀಪ ಬೆಳಗಿಸುವ ಮೂಲಕ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಭಾರತೀಯ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಚೌಧರಿ ಅವದೇಶ್ ಕುಮಾರ್, ಬಿಬಿಎಂಪಿ ಮೇಯರ್ ಮಂಜುನಾಥ್ ರೆಡ್ಡಿ ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com