
ಕಟಕ್: ಸೈಯದ್ ಮುಷ್ತಾಕ್ ಟಿ20 ಪಂದ್ಯಾವಳಿಯ ನಿರ್ಣಾಯಕ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ 26 ರನ್‍ಗಳ ಸೋಲನುಭವಿಸಿದ ಆರ್. ವಿನಯ್ ಕುಮಾರ್ ಸಾರಥ್ಯದ ಕರ್ನಾಟಕ, ದೇಶೀಯ ಕ್ರಿಕೆಟ್ ಪಂದ್ಯಾವಳಿಯ ಮೂರು ಪ್ರಮುಖ ಪಂದ್ಯಾವಳಿಗಳಲ್ಲಿ ಹೊಸದೊಂದು ಹ್ಯಾಟ್ರಿಕ್ ಸಾಧನೆಗೈದಿದೆ! ಮೊದಲಿಗೆ ರಣಜಿ, ಆ ಬಳಿಕ ವಿಜಯ್ ಹಜಾರೆ ನಂತರ ಇದೀಗ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯ ನಾಕೌಟ್ ಹಂತಕ್ಕೇರದೇ ಲೀಗ್ ಹಂತದಲ್ಲೇ ನಿರ್ಗಮಿಸಿ ಹಿನ್ನಡೆ ಅನುಭವಿಸಿದೆ. ರಣಜಿ ಮತ್ತು ವಿಜಯ್ ಹಜಾರೆ ಟ್ರೋಫಿಯನ್ನು ಈ ಬಾರಿ ಉಳಿಸಿಕೊಳ್ಳಲು ವಿಫಲವಾಗಿದ್ದ ಕರ್ನಾಟಕ, ಮುಷ್ತಾಕ್ ಅಲಿ ಚುಟುಕು ಪಂದ್ಯಾವಳಿಯಲ್ಲಿ ಒಮ್ಮೆಯೂ ಟ್ರೋಫಿ ಗೆದ್ದಿರಲಿಲ್ಲ. ಈ ಬಾರಿ ಆ ಕೊರತೆಯನ್ನು ನೀಗುವ ಗುರಿ ಇರಿಸಿಕೊಂಡಿದ್ದ ಅದು ಭ್ರಮನಿರಸನಗೊಂಡಿದೆ. ಅಂದಹಾಗೆ ಇಲ್ಲಿನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ `ಡಿ' ಗುಂಪಿನ ನಾಲ್ಕನೇ ಪಂದ್ಯದಲ್ಲಿ ಗೆಲ್ಲಲು 185 ರನ್ ಗುರಿ ಪಡೆದಿದ್ದ ಕರ್ನಾಟಕ, ಆರಂಭಿಕ ಹಾಗೂ ಸ್ಫೋಟಕ ಬ್ಯಾಟ್ಸ್‍ಮನ್ ರಾಬಿನ್ ಉತ್ತಪ್ಪ (80: 52 ಎಸೆತ, 10 ಬೌಂಡರಿ, 2 ಸಿಕ್ಸರ್) ಅವರ ಭರ್ಜರಿ ಅರ್ಧಶತಕದ ಹೊರತಾಗಿಯೂ ಇನ್ನೂ 9 ಎಸೆತಗಳು ಬಾಕಿ ಇರುವಂತೆಯೇ ಅಂದರೆ 18.3 ಓವರ್‍ಗಳಲ್ಲಿ 158ಕ್ಕೆ ಆಲೌಟ್ ಆಗಿ ಟೂರ್ನಿಯಲ್ಲಿ ತನ್ನ ನಾಕೌಟ್ ಹಂತದ ಆಸೆಯನ್ನು ಜೀವಂತ ಉಳಿಸಿಕೊಳ್ಳಲು ವಿಫಲವಾಯಿತು. ಶುಕ್ರವಾರ ನಡೆಯಲಿರುವ ಒಡಿಶಾ ವಿರುದ್ಧದ ಪಂದ್ಯವು ಕೇವಲ ಪ್ರತಿಷ್ಠೆ ಕಾಯ್ದುಕೊಳ್ಳಲಷ್ಟೇ ಮುಖ್ಯವಾಗಿದ್ದು, ಗೌರವ ಕಾಯ್ದುಕೊಳ್ಳಲು ಕರ್ನಾಟಕಕ್ಕೆ ಕಡೆಯ ಅವಕಾಶವಾಗಿದೆ.
Advertisement