
ಸಿಡ್ನಿ: ಆರಂಭಿಕ ಸೆಟ್‍ನಲ್ಲಿಯೇ ಎದುರಾದ ಸೋಲಿನಿಂದ ಕಿಂಚಿತ್ತೂ ಕಂಗೆಡದೆ ಚೇತರಿಕೆಯ ಪ್ರದರ್ಶನ ನೀಡಿ ಪಂದ್ಯದಲ್ಲಿ ಹಿಡಿತ ಸಾಧಿಸಿದ ಭಾರತದ ಅಗ್ರ ಕ್ರಮಾಂಕಿತೆ ಹಾಗೂ ವಿಶ್ವದ ಮಾಜಿ ನಂ.1 ಆಟಗಾರ್ತಿ ಮಾರ್ಟಿನಾ ಹಿಂಗಿಸ್, ತಮ್ಮ ಗೆಲುವಿನ ನಾಗಾಲೋಟವನ್ನು 30ನೇ ಪಂದ್ಯಕ್ಕೆ ವಿಸ್ತರಿಸಿದ್ದೇ ಅಲ್ಲದೆ, ಸಿಡ್ನಿ ಇಂಟರ್‍ನ್ಯಾಷನಲ್ ಟೆನಿಸ್ ಪಂದ್ಯಾ ವಳಿಯಲ್ಲಿ ಚಾಂಪಿಯನ್ ಆದರು. ವಿಶ್ವದ ನಂ.1 ಮಹಿಳಾ ಜೋಡಿಯಾದ ಸಾನಿಯಾ ಮತ್ತು ಹಿಂಗಿಸ್ ಶುಕ್ರವಾರ ಇಲ್ಲಿನ ನ್ಯೂ ಸೌತ್ ವೇಲ್ಸ್ ಸೆಂಟರ್‍ನಲ್ಲಿ ಮುಕ್ತಾಯ ಕಂಡ ಪಂದ್ಯಾವಳಿಯಲ್ಲಿ ಫ್ರಾನ್ಸ್ ನ ಮೂರನೇ ಶ್ರೇಯಾಂಕಿತ ಜೋಡಿ ಕೆರೋಲಿನ್ ಗಾರ್ಸಿಯಾ ಮತ್ತು ಕ್ರಿಸ್ಟಿನಾ ಮ್ಲೆಡೆನೋವಿಕ್ ಜೋಡಿ ಎದುರಿನ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ 1-6, 7-5, 10-5 ಸೆಟ್‍ಗಳ ಗೆಲುವು ಪಡೆಯಿತು. ಈ ಪ್ರಶಸ್ತಿಯೊಂದಿಗೆ ಈ ಋತುವಿನಲ್ಲಿ ಸಾನಿಯಾ-ಹಿಂಗಿಸ್ ಎರಡನೇ ಹಾಗೂ ಒಟ್ಟಾರೆ 11 ಪ್ರಶಸ್ತಿಗಳನ್ನು ಗೆದ್ದ ಸಾಧನೆಗೆ ಭಾಜನವಾಯಿತು. ಈ ಅಭೂತಪೂರ್ವ ಗೆಲುವು ಸೋಮವಾರ ಶುರುವಾಗಲಿರುವ ಆಸ್ಟ್ರೇಲಿಯಾ ಓಪನ್‍ಗೆ ಹೆಚ್ಚಿನ ಆತ್ಮವಿಶ್ವಾಸ ತಂದುಕೊಟ್ಟಂತಾಗಿದೆ. ಗ್ರೇಟ್ ಕಂ ಬ್ಯಾಕ್!: ಅಂದಹಾಗೆ ಸಾನಿಯಾ-ಹಿಂಗಿಸ್ ಜೋಡಿಯ ಜೈತ್ರಯಾತ್ರೆಗೆ ಇನ್ನೇನು ತೆರೆ ಎಳೆದುಬಿಟ್ಟೆವೇನೋ ಎಂಬಷ್ಟರ ಮಟ್ಟಿಗೆ ಮೊದಲ ಸೆಟ್‍ನಲ್ಲಿ ಅಬ್ಬರದ ಪ್ರದರ್ಶನ ನೀಡಿದ ಫ್ರಾನ್ಸ್ ನ ಜೋಡಿ, ಎರಡನೇ ಸೆಟ್‍ನಲ್ಲಿಯೂ 5-2ರಿಂದ ವಿಜೃಂಭಿಸಿತು. ಆದರೆ, ಈ ಹಂತದಲ್ಲಿ ಸಾನಿಯಾ ಮತ್ತು ಹಿಂಗಿಸ್ ತಿರುಗಿಬಿದ್ದ ಪರಿ ಟೆನಿಸ್ ಕೋರ್ಟ್‍ನಲ್ಲಿ ಪಂದ್ಯವನ್ನು ನೋಡುತ್ತಾ ಕುಳಿತಿದ್ದ ಪ್ರೇಕ್ಷಕರು ದಿಗ್ಗನೇಳುವಂತೆ ಮಾಡಿತು. ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ಸಾನಿಯಾ ಜೋಡಿಗೆ ಸೋಲು ನಿಶ್ಚಿತ ಎಂದುಕೊಂಡವರಿಗೆ ಈ ಇಂಡೋ-ಸ್ವಿಸ್ ಜೋಡಿ ಭರಪೂರ ಮನರಂಜನೆ ನೀಡಿತು. ಅದರಲ್ಲೂ ಸೂಪರ್ ಟೈ ಬ್ರೇಕರ್ ಗೇಮ್ ಅಂತೂ ಯಾರತ್ತ ವಾಲುತ್ತದೆ ಎಂಬುದೇ ಕೌತುಕ ಕೆರಳಿಸಿತು. ಆದರೆ, ತಮ್ಮೆಲ್ಲಾ ಅನುಭವಧಾರೆ ಎರೆದ ಸಾನಿಯಾ-ಹಿಂಗಿಸ್ ಫ್ರಾನ್ಸ್ ಜೋಡಿಗೆ ಸೋಲುಣಿಸುವಲ್ಲಿ ಯಶ ಕಂಡಿತು.
Advertisement