
ನವದೆಹಲಿ: ಭ್ರಷ್ಟಾಚಾರದ ಆರೋಪಗಳಿಂದಾಗಿ ದೇಶದ ಗಮನ ಸೆಳೆದಿದ್ದ ಡೆಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ)ಯ ಅವಗಾಹನಾ ವರದಿಯನ್ನು ನಿವೃತ್ತ ನ್ಯಾಯಮೂರ್ತಿ ಮುದ್ಗಲ್ ನೇತೃತ್ವದ ಸಮಿತಿ, ಸೋಮವಾರ ದೆಹಲಿ ಹೈ ಕೋರ್ಟ್ ಗೆ ಸಲ್ಲಿಸಿದೆ.
ವರದಿಯಲ್ಲಿ ಡಿಡಿಸಿಎಯಲ್ಲಿನ ಅನೇಕ ಮೋಸದ ಬಗ್ಗೆ ಬೆಳಕು ಚೆಲ್ಲಲಾಗಿದ್ದು ಶೀಘ್ರದಲ್ಲೇ ಆರಂಭಗೊಳ್ಳಲಿರುವ ವಿಶ್ವ ಟಿ 20 ಪಂದ್ಯಗಳ ಆತಿಥ್ಯ ಡಿಡಿಸಿಎ ಉಸ್ತುವಾರಿಯಲ್ಲಿರುವ ಫಿರೋಜ್ ಷಾ ಕೋಟ್ಲಾ ಮೈದಾನಕ್ಕೆ ಅಲಭ್ಯವಾಗುವ ಭೀತಿ ಎದುರಾಗಿದೆ.
ಡಿಡಿಸಿಎ ವಿರುದ್ಧ ದೆಹಲಿ ಸರ್ಕಾರ ಮಾಡಿದ್ದ ಹಗರಣಗಳ ಆರೋಪಗಳ ಹಿನ್ನೆಲೆಯಲ್ಲಿ ನ್ಯಾಯಾಲಯವು, ನ್ಯಾ.ಮುದ್ಗಲ್ ಅವರನ್ನು ಡಿಡಿಸಿಎ ಪರಿವೀಕ್ಷಕರನ್ನಾಗಿ ನೇಮಿಸಿತ್ತು. ಅವರ ಉಸ್ತುವಾರಿಯಲ್ಲಿ ಕಳೆದ ವರ್ಷಾಂತ್ಯಕ್ಕೆ ನಡೆದಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯವನ್ನು ಆಯೋಜಿಸಲಾಗಿತ್ತು.
ವರದಿಯಲ್ಲೇನಿದೆ?
ಇಪ್ಪತ್ತೇಳು ಪುಠಗಳುಳ್ಳ ಈ ವರದಿಯಲ್ಲಿ ಡಿಡಿಸಿಎಯಲ್ಲಿ ಹಣದ ದುರುಪಯೋಗವಾಗಿರುವ ಬಗ್ಗೆ ಮುದ್ಗಲ್ ಪ್ರಸ್ತಾಪಿಸಿದ್ದಾರೆ. ಕ್ರೀಡಾಂಗಣದ ಕಾಮಗಾರಿಗಳು ಹಾಗೂ ಇನ್ನಿತರ ಆರ್ಥಿಕ ಅವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆ ಕಡತಗಳು ನಾಪತ್ತೆಯಾಗಿರುವುದರಿಂದ ಹಲವಾರು ಆರ್ಥಿಕ ವ್ಯವಹಾರಗಳ ಬಗ್ಗೆ ಮಾಹಿತಿ ಇಲ್ಲದಂತಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಆಡಳಿತ ಮಂಡಳಿಯು ಯಾವುದೇ ಕ್ರಮಕೈಗೊಳ್ಳದೇ ಇರುವುದೂ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಇದು ಡಿಡಿಸಿಎನ ವ್ವವಸ್ಥಾಪಕ ಮಂಡಳಿ ಹಾಗೂ ಲೆಕ್ಕ ಪತ್ರ ವಿಭಾಗದ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ.
ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಸೂಕ್ತ ಕ್ರಮಕೈಗೊಳ್ಳುವ ಅವಶ್ಯಕತೆಯಿದೆ. ಇದಾಗದಿದ್ದರೆ, ಮುಂದೆ ಇದು ಮತ್ತಷ್ಟು ಅಕ್ರಮಗಳಿಗೆ ಕಾರಣವಾಗಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಡಿಡಿಸಿಎ ಮೇಲೆ ಅಗಾಧ ನಂಬಿಕೆಯಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಪ್ರತಿಕ್ರಿಯಿಸಿದ್ದಾರೆ.
Advertisement