
ವಿಶಾಖಪಟ್ಟಣ: ದೇಸಿ ಕ್ರೀಡೆಯಾದ ಕಬಡ್ಡಿಯ ಅಪ್ಪಟ ಅಭಿಮಾನಿಗಳು ನಿರೀಕ್ಷಿಸುತ್ತಿರುವ ಮೂರನೇ ಆವೃತ್ತಿಯ ಪ್ರೊ. ಕಬಡ್ಡಿ ಲೀಗ್ ಪಂದ್ಯಾವಳಿ ಇಂದಿನಿಂದ ಆರಂಭಗೊಳ್ಳಲಿದೆ. ಪ್ರತಿಭಾನ್ವಿತ ಆಟಗಾರರ ಸಾಮರ್ಥ್ಯ ಪ್ರದರ್ಶನಕ್ಕಾಗಿ ವೇದಿಕೆ ಸಿದ್ದಗೊಂಡಿದ್ದು, ಇಲ್ಲಿನ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಟೂರ್ನಿಯ. ಮೊದಲ ದಿನವೇ ಎರಡು ಪಂದ್ಯಗಳು ನಡೆಯಲಿವೆ.
ಒಟ್ಟು 34 ದಿನಗಳ ಕಾಲ ನಡೆಯಲಿರುವ 3ನೇ ಆವೃತ್ತಿಯ ಲೀಗ್‌ನಲ್ಲಿ ಹಲವು ಬದಲಾವಣೆಗಳಾಗಿದ್ದು, ಯು ಮುಂಬಾ ತಂಡವನ್ನು ಹೊರತುಪಡಿಸಿ ಇತರ ತಂಡಗಳು ಒಪ್ಪಂದದ ಅನ್ವಯ ಆಟಗಾರರನ್ನು ಬದಲಾಯಿಸಿವೆ.
ಮಾ. 5ರವರೆಗೆ ನಡೆಯುವ ಲೀಗ್ ಫ್ರಾಂಚೈಸಿ ಆಧಾರಿತ ವೈಜಾಗ್, ಬೆಂಗಳೂರು, ಕೋಲ್ಕೊತಾ, ಪುಣೆ, ಪಟನಾ, ಜೈಪುರ, ಡೆಲ್ಲಿ ಮತ್ತು ಮುಂಬಯಿ ಸೇರಿದಂತೆ ಎಂಟು ನಗರಗಳಲ್ಲಿ ತಲಾ ಏಳು ಪಂದ್ಯಗಳಂತೆ ಸಾಗಲಿದೆ.
ಬೆಂಗಳೂರು ಬುಲ್ಸ್ ಗೆ ಡೆಲ್ಲಿ ಸವಾಲು
ಕಳೆದ ಆವೃತ್ತಿಯ ಕೇವಲ 6 ಅಂಕಗಳಿಂದ ಯು ಮುಂಬಾಗೆ ಮಣಿದಿದ್ದ ಬುಲ್ಸ್ ತಂಡ ಈ ಬಾರಿ ಪ್ರಶಸ್ತಿ ಎತ್ತಿಹಿಡಿಯುವ ಉಮೇದಿನಲ್ಲಿದೆ. ಕೋಚ್ ರಣಧೀರ್ ಸಿಂಗ್ ಸಾರಥ್ಯದಲ್ಲಿ ಅಭ್ಯಾಸ ನಡೆಸಿರುವ ಸುರ್ಜೀತ್ ನರ್ವಾಲ್ ಬಳಗ, ಯುವ ತಂಡವನ್ನು ಒಳಗೊಂಡಿದೆ. ಉದ್ಘಾಟನಾ ಆವೃತ್ತಿಯಲ್ಲಿ ಸೆಮೀಸ್ ತಲುಪಿದ್ದ ಬುಲ್ಸ್ ಎರಡನೇ ಆವೃತ್ತಿಯಲ್ಲಿ ಪ್ರಶಸ್ತಿ ಸುತ್ತಿನಲ್ಲಿ ಎಡವಿತ್ತು. ಒಟ್ಟು 32 ಪಂದ್ಯಗಳನ್ನಾಡಿರುವ ಬುಲ್ಸ್ ತಂಡ 18 ಜಯ, 13 ಸೋಲು ಮತ್ತು 1ರಲ್ಲಿ ಡ್ರಾ ಮಾಡಿಕೊಂಡಿದೆ.
ಇನ್ನೊಂದೆಡೆ ಕಳೆದ ಎರಡೂ ಆವೃತ್ತಿಗಳಲ್ಲಿ ನೀರಸ ಪ್ರದರ್ಶನ ತೋರಿರುವ ದಬಾಂಗ್ ಡೆಲ್ಲಿ ತಂಡ ಈ ಬಾರಿ ಕರ್ನಾಟಕದ ಹೊನ್ನಪ್ಪ ಗೌಡ ಅವರ ಗರಡಿಯಲ್ಲಿ ಪಳಗಿದ್ದು ಪ್ರಬಲ ತಂಡಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ. ಅದರಲ್ಲೂ ಆರಂಭಿಕ ಪಂದ್ಯದಲ್ಲೇ ಬುಲ್ಸ್ ಮೇಲೆ ಸವಾರಿ ಮಾಡಲು ರವೀಂದರ್ ಪಹಲ್ ಪಡೆ ಎದುರು ನೋಡುತ್ತಿದೆ.
Advertisement