
ಪ್ರಿಟೋರಿಯಾ: ಸ್ವಂತ ಪ್ರೇಯಸಿಯನ್ನೇ ಕೊಂದ ಆರೋಪ ಎದುರಿಸುತ್ತಿದ್ದ ಖ್ಯಾತ ಪ್ಯಾರಾಲಿಂಪಿಕ್ಸ್ ಕ್ರೀಡಾಪಟು, ಬ್ಲೇಡ್ ರನ್ನರ್ ಖ್ಯಾತಿಯ ಆಸ್ಕರ್ ಪಿಸ್ಟೋರಿಯಸ್ ಗೆ 6 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಪ್ರಿಟೋರಿಯಾ ನ್ಯಾಯಾಲಯ ಆದೇಶ ಹೊರಡಿಸಿದೆ.
ಪ್ರೇಯಸಿ ರೀವಾ ಸ್ಟೀನ್ ಕಂಪ್ ಕೊಲೆ ಪ್ರಕರಣ ಸಂಬಂಧ ಈ ಹಿಂದೆ ನಡೆದಿದ್ದ ವಿಚಾರಣೆಯಲ್ಲಿ ನ್ಯಾಯಮೂರ್ತಿಗಳಾದ ಮಸಿಪ್ಪಾ ಅವರು ಪಿಸ್ಟೋರಿಯಸ್ ಅಪರಾಧಿ ಎಂದು ಘೋಷಣೆ ಮಾಡಿದ್ದರು. ಅದರಂತೆ ಪ್ರಿಟೋರಿಯಾ ನ್ಯಾಯಾಲಯ ಇಂದು ಅಪರಾಧಿ ಪಿಸ್ಟೋರಿಯಸ್ ಗೆ ಶಿಕ್ಷೆ ಪ್ರಮಾಣ ವಿಧಿಸಿದ್ದು, ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
2013ರ ಪ್ರೇಮಿಗಳ ದಿನದಂದು ಆಸ್ಕರ್ ಪಿಸ್ಟೋರಿಯಸ್ ತನ್ನ ಮನೆಯಲ್ಲಿ ಮಲಗಿದ್ದ ವೇಳೆ ಆತನಿಗೆ ಸರ್ ಪ್ರೈಸ್ ಕೊಡಲೆಂದು ರಾತ್ರೋರಾತ್ರಿ ವಿಶ್ ಮಾಡಲೆಂದು ಆತನ ಪ್ರೇಯಸಿ ರೀವಾ ಸ್ಟೀನ್ ಕಂಪ್ ಆತನ ಕೊಠಡಿಗೆ ಆಗಮಿಸಿದ್ದಳು. ಆದರೆ ಕೊಠಡಿಯಲ್ಲಿ ಕತ್ತಲೆ ಇದ್ದಿದ್ದರಿಂದ ಪಿಸ್ಟೋರಿಯಸ್ ಪ್ರೇಯಸಿಯನ್ನು ಡಕಾಯಿತ ಎಂದು ಭಾವಿಸಿ ತನ್ನ ಬಳಿ ಇದ್ದ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂದಿದ್ದ.
ಬಳಿಕ ಪೊಲೀಸರು ಪಿಸ್ಟೋರಿಯಸ್ ನನ್ನು ಬಂಧಿಸಿ ವಿಚಾರಣೆ ಮಾಡಲಾಗಿ 2014 ಸೆಪ್ಟೆಂಬರ್ ನಲ್ಲಿ ಪ್ರಿಟೋರಿಯಾ ನ್ಯಾಯಾಲಯ ಆಸ್ಕರ್ ಪಿಸ್ಟೋರಿಯಸ್ ಅಪರಾಧಿ ಎಂದು ಘೋಷಿಸಿತ್ತು. ಅಂತೆಯೇ ರೀವಾ ಸ್ಟೀನ್ ಕಂಪ್ ಳ ಪೋಷಕರು ಪಿಸ್ಟೋರಿಯಸ್ ಗೆ ಗರಿಷ್ಠ ಪ್ರಮಾಣದ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದರು. ಅವರ ಪರ ವಕೀಲರು ಕೂಡ ಪಿಸ್ಟೋರಿಯಸ್ ಮಾಡಿದ್ದ ಕ್ರೂರ ಕೃತ್ಯಕ್ಕೆ ಕಡಿಮೆಯೆಂದರೂ 15 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬೇಕೆಂದು ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಬಳಿಕ ನಡೆದ ಮ್ಯಾರಥಾನ್ ವಿಚಾರಣೆ ಬಳಿಕ ಅಂತಿಮವಾಗಿ ಇಂದು ಪ್ರಿಟೋರಿಯಾ ನ್ಯಾಯಾಲಯ ಆಸ್ಕರ್ ಪಿಸ್ಟೋರಿಯಸ್ ಗೆ 6 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬರೊಬ್ಬರಿ ಆರು ಬಾರಿ ಬಂಗಾರ ಪದಕ ವಿಜೇತರಾಗಿದ್ದ ಆಸ್ಕರ್ ಪಿಸ್ಟೋರಿಯಸ್ ತಮ್ಮ ಅಭೂತಪೂರ್ವ ಸಾಧನೆಯಿಂದಾಗಿ ಬ್ಲೇಡ್ ರನ್ನರ್ ಎಂದೇ ಖ್ಯಾತಿ ಗಳಿಸಿದ್ದರು.
Advertisement