
ನವದೆಹಲಿ: ಮುಂಬರುವ ರಿಯೋ ಒಲಿಪಿಂಕ್ಸ್ ಗೆ ಸಿದ್ಧರಾಗಿರುವ ಕ್ರೀಡಾಪಟುಗಳಿಗೆ ಶಾಕ್ ಮೇಲೆ ಶಾಕ್ ನೀಡುತ್ತಿರುವ ನಾಡಾ, ನರಸಿಂಗ್ ಯಾದವ್ ಬಳಿಕ ಶಾರ್ಟ್ ಪುಟ್ಟರ್ ಕ್ರೀಡಾಪಟು ಇಂದರ್ ಜೀತ್ ಕೂಡ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಿದೆ.
ಈ ಹಿಂದೆ ರೆಸ್ಲರ್ ನರಸಿಂಗ್ ಯಾದವ್ ನಾಡಾ (ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟರ)ನಡೆಸಿದ ಪರೀಕ್ಷೆಯಲ್ಲಿ ವಿಫರಾಗಿದ್ದರು. ಬಳಿಕ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು. ಈ ಪ್ರಕರಣ ಹಸಿರಾಗಿರುವಾಗಲೇ ಮತ್ತೋರ್ವ ಖ್ಯಾತ ಕ್ರೀಡಾಪಟು ಡೋಪಿಂಗ್ ಟೆಸ್ಟ್ ನಲ್ಲಿ ಸಿಕ್ಕಿಬಿದ್ದಿದ್ದಾರೆ. ಮೂಲಗಳ ಪ್ರಕಾರ ಏಷ್ಯನ್ ಕ್ರೀಡಾಕೂಟದ ಚಾಂಪಿಯನ್ 28 ವರ್ಷದ ಇಂದರ್ ಜೀತ್ ಅವರು ಡೋಪಿಂಗ್ ಟೆಸ್ಟ್ ನಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಜೂನ್ 22ರಂದು ಇಂದರ್ ಜೀತ್ ಅವರಿಂದ ಸಂಗ್ರಹಿಸಿದ್ದ ರಕ್ತದ ಮಾದರಿಯನ್ನು ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆಯಲ್ಲಿ ಇಂದರ್ ಜೀತ್ ಅವರು ನಿಷೇಧಿತ ಉದ್ದೀಪನ ಮದ್ದು ಸೇವಿಸಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಅವರ ಬಿ ಸ್ಯಾಂಪಲ್ ರಕ್ತದ ಮಾದರಿ ಕೂಡ ಪಾಸಿಟಿವ್ ಎಂದು ತಿಳಿದುಬಂದಿದ್ದು, ನರಸಿಂಗ್ ಯಾದವ್ ರಂತೆ ಅವರನ್ನು ಕೂಡ ಒಲಿಂಪಿಕ್ಸ್ ಸಂಸ್ಥೆ ಅಮಾನತು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
2014ರಲ್ಲಿ ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪರ ಬೆಳ್ಳಿ ಪದಕ ಪಡೆದು ದಾಖಲೆ ಬರೆದಿದ್ದ ಹರ್ಯಾಣ ಮೂಲದ ಇಂದರ್ ಜೀತ್ ಇದೀಗ ಉದ್ದೀಪಮನ ಮದ್ದು ಪ್ರಕರಣದಲ್ಲಿ ಸಿಕ್ಕಿ ಬೀಳುವ ಮೂಲಕ ಇದೇ ಆಗಸ್ಟ್ 5ರಿಂದ ಆರಂಭಗೊಳ್ಳಲಿರುವ "ರಿಯೋ ಒಲಿಂಪಿಕ್ಸ್" ನಿಂದ ವಂಚಿತರಾಗಲಿದ್ದಾರೆ.
Advertisement