ಒಲಿಂಪಿಕ್ಸ್ ಜ್ಯೋತಿ ಕಾರ್ಯಕ್ರಮದಲ್ಲಿ ಕ್ರೀಡಾಕೂಟದ ಲಾಂಛನ "ಚಿರತೆ" ಹತ್ಯೆ!

ರಿಯೊ ಒಲಿಪಿಂಕ್ಸ್ ಆತಿಥ್ಯ ವಹಿಸಿಕೊಂಡಿರುವ ಬ್ರೆಜಿಲ್ ಇದೀಗ ನೂತನ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದು, ಕ್ರೀಡಾಕೂಟದ ಲಾಂಛನ "ಗಿಂಗಾ" (ಚಿರತೆ)ಯನ್ನು ಹತ್ಯೆ ಮಾಡುವ ಮೂಲಕ ವಿಶ್ವಸಮುದಾಯದ ಆಕ್ರೋಶ ಎದುರಿಸುವಂತಾಗಿದೆ.
ಒಲಿಂಪಿಕ್ಸ್ ಜ್ಯೋತಿ ಕಾರ್ಯಕ್ರಮದಲ್ಲಿ ಸಾವಿಗೀಡಾದ ಚಿರತೆ ಜುಮಾ (ರಾಯಿಟರ್ಸ್ ಚಿತ್ರ)
ಒಲಿಂಪಿಕ್ಸ್ ಜ್ಯೋತಿ ಕಾರ್ಯಕ್ರಮದಲ್ಲಿ ಸಾವಿಗೀಡಾದ ಚಿರತೆ ಜುಮಾ (ರಾಯಿಟರ್ಸ್ ಚಿತ್ರ)

ಮನಾಸ್: ರಿಯೊ ಒಲಿಪಿಂಕ್ಸ್ ಆತಿಥ್ಯ ವಹಿಸಿಕೊಂಡಿರುವ ಬ್ರೆಜಿಲ್ ಇದೀಗ ನೂತನ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದು, ಕ್ರೀಡಾಕೂಟದ ಲಾಂಛನ "ಗಿಂಗಾ" (ಚಿರತೆ)ಯನ್ನು  ಹತ್ಯೆ ಮಾಡುವ ಮೂಲಕ ವಿಶ್ವಸಮುದಾಯದ ಆಕ್ರೋಶ ಎದುರಿಸುವಂತಾಗಿದೆ.

ಒಲಿಂಪಿಕ್ಸ್ ಕ್ರೀಡಾಕೂಟದ ನಿಮಿತ್ತ ಬ್ರೆಜಿಲ್ ನ ಮನಾಸ್ ನಲ್ಲಿ ಒಲಿಂಪಿಕ್ಸ್ ಜ್ಯೋತಿ ಪ್ರದರ್ಶನ ಕಾರ್ಯಕ್ರಮ ಆಯೋಜನೆಯಾಗಿತ್ತು. ಕಾರ್ಯಕ್ರಮದ ಆಯೋಜಕರು ಮತ್ತು ಸಂಘಟಕರು  ಕಾರ್ಯಕ್ರಮವನ್ನು ವಿಶೇಷಗೊಳಿಸುವ ನಿಟ್ಟಿನಲ್ಲಿ ಕ್ರೀಡಾಕೂಟದ ಲಾಂಛನವಾಗಿರುವ ಗಿಂಗಾ (ಚಿರತೆ)ವನ್ನು ಪ್ರದರ್ಶಿಸಲು ಜೀವಂತ ಚಿರತೆಯನ್ನೇ ತಂದಿದ್ದರು. ಕಾರ್ಯಕ್ರಮದ ವೇಳೆ ಜುಮಾ  ಎಂಬ ಈ ಜೀವಂತ ಚಿರತೆಯನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿಹಾಕಲಾಗಿತ್ತು.

ಆದರೆ ಕಾರ್ಯಕ್ರಮ ಆರಂಭವಾಗಿ ಕ್ರೀಡಾಪಟುವೊಬ್ಬರು ಜ್ಯೋತಿಯನ್ನು ಬೆಳಗುತ್ತಿದ್ದಂತೆಯೇ ಬೆಂಕಿ ಜ್ವಾಲೆ ನೋಡಿ ಗಾಬರಿಗೊಂಡ ಚಿರತೆ ತಪ್ಪಿಸಿಕೊಳ್ಳುವ ಯತ್ನದಲ್ಲಿ ಸೈನಿಕ ಕೈಯಲ್ಲಿದ್ದ  ಸರಪಳಿಯನ್ನು ಕಿತ್ತುಕೊಂಡು ಮತ್ತೋರ್ವ ಸೈನಿಕನತ್ತ ನೆಗೆಯಿತು. ಇದರಿಂದ ಗಾಬರಿಯಾದ ಸೈನಿಕ ತನ್ನ ಬಳಿ ಇದ್ದ ಬಂದೂಕಿನಿಂದ ಚಿರತೆ ಮೇಲೆ ಒಂದು ಸುತ್ತು ಗುಂಡು ಹಾರಿಸಿದ್ದಾನೆ.  ಕೂಡಲೇ ಚಿರತೆ ಗುಂಡೇಟಿನಿಂದ ಸಾವನ್ನಪ್ಪಿದೆ.

ಈ ಘಟನೆ ವಿಶ್ವವ್ಯಾಪಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಅಮಾಯಕ ಚಿರತೆ ಕೊಂದ ಸೈನಿಕರ ಮತ್ತು ಕಾರ್ಯಕ್ರಮಕ್ಕೆ ಅನಾವಶ್ಯಕವಾಗಿ ಜೀವಂತ ಚಿರತೆ ತಂದ ಸಂಘಟಕರ ವಿರುದ್ಧ ತೀವ್ರ ಆಕ್ರೋಶ  ವ್ಯಕ್ತವಾಗುತ್ತಿದೆ. ಇನ್ನು ಪ್ರಾಣಿದಯಾ ಸಂಘಟನೆ ಈ ಕುರಿತು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಬಲ ಪ್ರದರ್ಶನಕ್ಕೆ ಅಮಾಯಕ ಚಿರತೆಯನ್ನೇಕೆ ಕಾರ್ಯಕ್ರಮಕ್ಕೆ ತರಬೇಕಿತ್ತು ಎಂದು  ಕೇಳಿದ್ದು, ಅಲ್ಲದೆ ಚಿರತೆಯನ್ನು ಕಾರ್ಯಕ್ರಮಕ್ಕೆ ಕರೆತರಲು ಅನುಮತಿ ಕೊಟ್ಟವರಾರು ಎಂದು ಪ್ರಶ್ನಿಸಿದೆ.

ಎಚ್ಚೆತ್ತ ಸಂಘಟಕರಿಂದ ಕ್ಷಮೆ ಯಾಚನೆ
ಇನ್ನು ಚಿರತೆ ಸಾವಿಗೆ ಕುರಿತಂತೆ ವಿಶ್ವವ್ಯಾಪಿ ಭಾರಿ ವಿರೋಧ ಮತ್ತು ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಕಾರ್ಯಕ್ರಮ ಸಂಘಟಕರು, ತಮ್ಮಿಂದ ದೊಡ್ಡ ತಪ್ಪಾಗಿದೆ.  ಇನ್ನೆಂದೂ ಇಂತಹ ತಪ್ಪುಗಳಾಗುವುದಿಲ್ಲ. ಜೀವಂತ ಚಿರತೆಯನ್ನು ತಂದಿಟ್ಟುಕೊಳ್ಳಲು ಅನುಮತಿಯನ್ನೇ ನೀಡಬಾರದಿತ್ತು. ನಮ್ಮ ನಂಬಿಕೆ ಮತ್ತು ಮೌಲ್ಯಗಳು ಇಲ್ಲಿ ನಾಶವಾಗಿದೆ ಎಂದು ಹೇಳಿ  ಕ್ಷಮೆ ಕೋರಿದ್ದಾರೆ.

ಒಟ್ಟಾರೆ ಕಾರ್ಯಕ್ರಮವನ್ನು ವಿಶೇಷಗೊಳಿಸುವ ನಿಟ್ಟಿನಲ್ಲಿ ಆಯೋಜಕರು ಮಾಡಿದ ಯಡವಟ್ಟಿನಿಂದಾಗಿ ಅಮಾಯಕ ಪ್ರಾಣಿಯೊಂದು ಬಲಿಯಾಗಿ ಹೋಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com