
ನವದೆಹಲಿ: ಡೋಪಿಂಗ್ ಟೆಸ್ಟ್ ನಲ್ಲಿ ವಿಫಲವಾದ ರಷ್ಯಾದ ಟೆನ್ನಿಸ್ ಆಟಗಾರ್ತಿ ನಿಜಕ್ಕೂ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆಯಾಗಲೇಬೇಕು ಎಂದು ಸ್ಪೈನ್ ಆಟಾಗರ ರಾಫೆಲ್ ನಡಾಲ್ ಹೇಳಿದ್ದಾರೆ.
ಇಂಡಿಯನ್ ವೆಲ್ಸ್ ಟೆನ್ನಿಸ್ ಸರಣಿಯಲ್ಲಿ ಪಾಲ್ಗೊಂಡಿರುವ 14 ಬಾರಿ ಗ್ಲಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ರಾಫೆಲ್ ನಡಾಲ್, ಮರಿಯಾ ಶರಪೋವಾ ಪ್ರಕರಣವನ್ನು ಉದ್ದೇಶಿಸಿ ಮಾತನಾಡಿದರು. "ಡೋಪಿಂಗ್ ಟೆಸ್ಟ್ ನಲ್ಲಿ ವಿಫಲರಾಗಿರುವ ಮರಿಯಾ ಶರಪೋವಾರಿಂದ ನಿಜಕ್ಕೂ ತಪ್ಪಾಗಿದ್ದರೆ ಅವರನ್ನು ಶಿಕ್ಷೆಗೆ ಒಳಪಡಿಸಲೇಬೇಕು. ನಾನೆಂದಿಗೂ ಇಂತಹ ವಿಚಾರಗಳ ಬಗ್ಗೆ ತಲೆಕೆಡಿಸಿಕೊಂಡಿಯೇ ಇರಲಿಲ್ಲ. ವೃತ್ತಿ ಜೀವನದಲ್ಲಿ ಸಾಕಷ್ಟು ಬಾರಿ ನಾನು ಗಾಯಗೊಂಡಿದ್ದೇನೆ. ಆ ಬಳಿಕ ಸಾಕಷ್ಟು ಕಷ್ಟಪಟ್ಟು ತರಬೇತಿ ಪಡೆದು ಮತ್ತೆ ನನ್ನ ಫಾರ್ಮ್ ಕಂಡುಕೊಂಡಿದ್ದೇನೆ. ತ್ವರಿತವಾಗಿ ಚೇತರಿಸಿಕೊಳ್ಳಲು ನಾನು ಎಂದಿಗೂ ಮಾದಕ ದ್ರವ್ಯಗಳ ಬಳಕೆ ಮಾಡಿರಲಿಲ್ಲ ಎಂದು ನಡಾಲ್ ಹೇಳಿದರು.
"ವೃತ್ತಿಪರವಾಗಿ ನಾನು ನಿಜಕ್ಕೂ ಶುದ್ಧನಾಗಿದ್ದು, ಯಾವುದೇ ಕಾರಣಕ್ಕೂ ಮಾದಕ ದ್ರವ್ಯಗಳ ಬಳಕೆ ಮಾಡಿಲ್ಲ. ಸಾಕಷ್ಟು ಬಾರಿ ಅದರ ಬಳಕೆ ಕುರಿತು ನನಗೆ ಸಲಹೆ ಬಂದಿತ್ತಾದರೂ ಟೆನ್ನಿಸ್ ಗೆ ಪ್ರಚಾರ ರಾಯಭಾರಿಯಾಗಿರುವ ಇಂತಹ ಕ್ಷುಲ್ಲಕ ವಿಚಾರಗಳಿಗೆ ಒಳಗಾಗಬಾರದು ಎಂದು ಅವಗಳನ್ನು ನನ್ನಿಂದ ದೂರವಿಟ್ಟಿದ್ದೆ. ನಾನು ಕ್ರೀಡೆಯಲ್ಲಿ ವಿಶ್ವಾಸವಿಟ್ಟಿದ್ದು, ಯುವ ಆಟಗಾರರಿಗೆ ನಾನು ಮಾದರಿಯಾಗಿರಲು ಇಚ್ಛಿಸುತ್ತೇನೆ ಎಂದು ನಡಾಲ್ ಹೇಳಿದರು.
ಒಟ್ಟಾರೆ ಮರಿಯಾ ಶರಪೋವಾ ಅವರ ಡೋಪಿಂಗ್ ಟೆಸ್ಟ್ ವಿವಾದ ಇದೀಗ ಕ್ಲೀನ್ ಗೇಮ್ ಎಂದೇ ಖ್ಯಾತಿ ಗಳಿಸಿದ್ದ ಟೆನ್ನಿಸ್ ಗೂ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.
Advertisement