ಚೆಸ್: 3 ದಶಕಗಳ ಬಳಿಕ ಅಗ್ರ ಸ್ಥಾನ ಕೈಚೆಲ್ಲಿದ ಆನಂದ್

ಸತತ ಐದು ಬಾರಿ ವಿಶ್ವ ಚಾಂಪಿಯನ್ ಆಗಿ ಮೆರೆದಿದ್ದ ಭಾರತದ ಚೆಸ್ ಆಟಗಾರ ವಿಶ್ವನಾಥನ್ ಆನಂದ 3 ದಶಕಗಳ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಅಗ್ರಸ್ಥಾನವನ್ನು ಕಳೆದುಕೊಂಡಿದ್ದಾರೆ..
ವಿಶ್ವನಾಥನ್ ಆನಂದ್ (ಸಂಗ್ರಹ ಚಿತ್ರ)
ವಿಶ್ವನಾಥನ್ ಆನಂದ್ (ಸಂಗ್ರಹ ಚಿತ್ರ)

ಮಾಸ್ಕೋ: ಸತತ ಐದು ಬಾರಿ ವಿಶ್ವ ಚಾಂಪಿಯನ್ ಆಗಿ ಮೆರೆದಿದ್ದ ಭಾರತದ ಚೆಸ್ ಆಟಗಾರ ವಿಶ್ವನಾಥನ್ ಆನಂದ 3 ದಶಕಗಳ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಅಗ್ರಸ್ಥಾನವನ್ನು  ಕಳೆದುಕೊಂಡಿದ್ದಾರೆ.

ಬುಧವಾರ 2016ರ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ 4ನೇ ಸುತ್ತಿನ ಪಂದ್ಯದಲ್ಲಿ ರಷ್ಯಾದ ಸೆರ್ಗಿ ಕರ್ಜಾಕಿನ್ ವಿರುದ್ಧ ಆಘಾತಕಾರಿ ಸೋಲು ಕಂಡ ಬೆನ್ನಲ್ಲೇ ಭಾರತದ ನಂ.1 ಚೆಸ್ ಆಟಗಾರ  ಎನ್ನುವ ಪಟ್ಟವನ್ನು ಆನಂದ್ ಪೆಂಟಾಲಾ ಹರಿಕೃಷ್ಣಗೆ ಬಿಟ್ಟುಕೊಟ್ಟಿದ್ದಾರೆ. ಎಲೋ ರೇಟಿಂಗ್‌ನಲ್ಲಿ ಆನಂದ್ 2763 ಅಂಕ ಹೊಂದಿದ್ದರೆ, ಪಿ. ಹರಿಕೃಷ್ಣ 2763.3 ಅಂಕ ಗಳಿಸುವ ಮೂಲಕ  ಭಾರತದ ನಂ.1 ಚೆಸ್ ಆಟಗಾರ ಎನಿಸಿಕೊಂಡಿದ್ದಾರೆ. ಎಲೋ ಜಾಗತಿಕ ರೇಟಿಂಗ್‌ನಲ್ಲಿ ಹರಿಕೃಷ್ಣ 13ನೇ ಸ್ಥಾನಕ್ಕೇರಿದ್ದರೆ, ಆನಂದ್ 14ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆದರೆ ಆನಂದ್ ಮುಂದಿನ  ಪಂದ್ಯ ಗೆದ್ದರೆ ಮತ್ತೆ ಭಾರತದ ನಂ. 1 ಆಟಗಾರ ಎಂಬ ಶ್ರೇಯ ಒಲಿಸಿಕೊಳ್ಳಲಿದ್ದಾರೆ.

ಇನ್ನೊಂದೆಡೆ ಕಳಪೆ ಫಾರ್ಮ್‌ನಲ್ಲಿರುವ ಆನಂದ್ ಕಳೆದ 26 ಪಂದ್ಯಗಳಲ್ಲಿ 8 ಪಂದ್ಯವನ್ನು ಸೋತಿದ್ದು, ಉಳಿದ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದಾರೆ. ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸೆನ್  ವಿರುದ್ಧ ಚೆಸ್ ವಿಶ್ವಚಾಂಪಿಯನ್‌ಷಿಪ್‌ನ ಎದುರಾಳಿಯನ್ನು ನಿರ್ಧರಿಸಲು ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಆಡಿಸಲಾಗುತ್ತಿದ್ದು, ಇದರಲ್ಲಿ ವಿಜೇತರಾದ ಆಟಗಾರ ಕಾರ್ಲ್‌ಸೆನ್ ವಿರುದ್ಧ ಆಡಲಿದ್ದಾರೆ.

25 ವರ್ಷದ ಕರ್ಜಾಕಿನ್ ಇದೇ ಮೊದಲ ಬಾರಿಗೆ ಆನಂದ್ ವಿರುದ್ಧ ಗೆಲುವು ಸಾಧಿಸಿದ್ದು, ಕ್ಯಾಂಡಿಡೇಟ್ಸ್ ಟೂರ್ನಿಯ 4 ಸುತ್ತಿನ ಪಂದ್ಯಗಳ ಅಂತ್ಯಕ್ಕೆ 3 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.  ಆನಂದ್ 2 ಅಂಕದೊಂದಿಗೆ ಜಂಟಿ 3ನೇ ಸ್ಥಾನದಲ್ಲಿದ್ದು, ಇನ್ನೂ 10 ಸುತ್ತಿನ ಆಟ ಬಾಕಿ ಉಳಿದಿದೆ. ಅತಿ ಚಿಕ್ಕ ವಯಸ್ಸಿನಲ್ಲೇ ಗ್ರಾಂಡ್ ಮಾಸ್ಟರ್ ಆದ ರಷ್ಯಾ ಆಟಗಾರ ಎನ್ನುವ ಕೀರ್ತಿ  ಹೊಂದಿರುವ ಕರ್ಜಾಕಿನ್, 12ನೇ ವರ್ಷದಲ್ಲೇ ವೃತ್ತಿಪರ ಚೆಸ್‌ಗೆ ಪದಾರ್ಪಣೆ ಮಾಡಿ ಕಳೆದ ವರ್ಷ ಚೆಸ್ ವಿಶ್ವಕಪ್ ಕೂಡ ಜಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com