
ನವದೆಹಲಿ: 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ಇತ್ತೀಚೆಗೆ ಬೆಳ್ಳಿಗೆ ಭಡ್ತಿ ಪಡೆದಿದ್ದ ಭಾರತದ ಕುಸ್ತಿಪಟು ಯೋಗೀಶ್ವರ್ ದತ್ ಅವರ ಚಿನ್ನದ ಪದಕದಾಸೆಗೆ ಅಂತಾರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ತೆಡೆಯೊಡ್ಡಿದೆ.
ಈ ಹಿಂದೆ ಬೆಳ್ಳಿಗೆ ಭಡ್ತಿ ಪಡೆದಿದ್ದ ಯೋಗೀಶ್ವರ್ ದತ್ ಪದಕ, ಮತ್ತೆ ಭಡ್ತಿ ಪಡೆದು ಚಿನ್ನಕ್ಕೆ ಪರಿವರ್ತನೆಯಾಗುವ ಕುರಿತು ಸುದ್ದಿಗಳು ಹರಿದಾಡಿದ್ದವು. 2012ರಲ್ಲಿ ಕುಸ್ತಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಅಜರ್ ಬೈಜಾನ್ ನ ಟೊಗ್ರುಲ್ ಅಸ್ಗರೋವ್ ಉದ್ದೀಪನ ಮದ್ದು ಸೇವಿಸಿರುವ ಕುರಿತು ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಯೋಗೀಶ್ವರ್ ದತ್ ಬೆಳ್ಳಿ ಪದಕ ಮತ್ತೆ ಭಡ್ತಿ ಪಡೆದು ಚಿನ್ನವಾಗಿ ಪರಿವರ್ತನೆಯಾಗುವ ಆಸೆ ಭಾರತೀಯ ಕ್ರೀಡಾಭಿಮಾನಿಗಳಲ್ಲಿ ಚಿಗುರೊಡೆದಿತ್ತು.
ಆದರೆ ವಾಡಾ ನಡೆಸಿದ ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಟೊಗ್ರುಲ್ ಅಸ್ಗರೋವ್ ರಕ್ತದ ಮಾದರಿಯಲ್ಲಿ ಯಾವುದೇ ರೀತಿಯ ಉದ್ದೀಪನ ಮದ್ದಿನ ಅಂಶ ಕಂಡುಬಂದಿಲ್ಲ ಎಂದು ವೈದ್ಯಕೀಯ ವರದಿಗಳು ಸ್ಪಷ್ಟಪಡಿಸಿವೆ. ಈ ಬಗ್ಗೆ ಸ್ವತಃ ಅಂತಾರಾಷ್ಟ್ರೀಯ ರೆಸ್ಲಿಂಗ್ ಸಂಸ್ಥೆ ಸ್ಪಷ್ಟನೆ ನೀಡಿದ್ದು ಟೊಗ್ರುಲ್ ಅಸ್ಗರೋವ್ ರಕ್ತದ ಮಾದರಿಯಲ್ಲಿ ಯಾವುದೇ ನಿಷೇಧಿತ ಅಂಶ ಕಂಡುಬಂದಿಲ್ಲ ಎಂದು ಹೇಳಿದೆ. ಹೀಗಾಗಿ ಯೋಗೀಶ್ವರ್ ದತ್ ಅವರ ಬೆಳ್ಳಿ ಪದಕ ಚಿನ್ನವಾಗಿ ಪರಿವರ್ತನೆಯಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಮೊದಲ ಸ್ಥಾನದಲ್ಲಿ ಟೊಗ್ರುಲ್ ಅಸ್ಗರೋವ್ ಮುಂದುವರೆಯಲಿದ್ದು, ದತ್ 2ನೇ ಸ್ಥಾನದ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.
ಈ ಹಿಂದೆ ಲಂಡನ್ ಒಲಿಂಪಿಕ್ಸ್ ನಲ್ಲಿ 2ನೇ ಸ್ಥಾನ ಗಳಿಸಿ ಬೆಳ್ಳಿ ಪದಕ ಗಳಿಸಿದ್ದ ರಷ್ಯಾದ ಬೆಸಿಕ್ ಕುಡುಖೋವ್ ಅವರ ರಕ್ತದ ಮಾದರಿಯಲ್ಲಿ ನಿಷೇಧಿತ ಉದ್ದೀಪನ ಮದ್ದಿನ ಅಂಶ ಕಂಡುಬಂದಿತ್ತು. ಹೀಗಾಗಿ ಅವರ ಬೆಳ್ಳಿ ಪದಕವನ್ನು ಒಲಿಂಪಿಕ್ಸ್ ಸಂಸ್ಥೆ ಯೋಗೀಶ್ವರ್ ದತ್ ಅವರಿಗೆ ವರ್ಗಾಯಿಸಿತ್ತು.
Advertisement