
ಪಿಟ್ಸ್ ಬರ್ಗ್: "ಕಿಂಗ್ ಆಫ್ ಗಾಲ್ಫ್" ಎಂದೇ ಖ್ಯಾತರಾಗಿದ್ದ ಅಮೆರಿಕ ಗಾಲ್ಫ್ ದಂತಕಥೆ ಅರ್ನಾಲ್ಡ್ ಪಾಲ್ಮರ್ ಸೋಮವಾರ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
87 ವರ್ಷ ವಯಸ್ಸಿನ ಪಾಲ್ಮರ್ ಕಳೆದೊಂದು ವರ್ಷದಿಂದ ವಯೋ ಸಹಜ ಖಾಯಿಲೆಗಳಿಂದ ಬಳಲುತ್ತಿದ್ದರು. ಹೃದಯ ಸಂಬಂಧಿ ಖಾಯಿಲೆಗಾಗಿ ಪೆನ್ಸಿಲ್ವೇನಿಯಾದ ಪಿಟ್ಸ್ ಬರ್ಗ್ ನಲ್ಲಿರುವ ಯುಪಿಎಂಸಿ ಪ್ರೆಸ್ಬಿಟೇರಿಯನ್ ಆಸ್ಪತ್ರೆಗೆ ದಾಖಲಾಗಿದ್ದ ಪಾಲ್ಮರ್ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ಅಧಿಕೃತ ಪ್ರಕಟಣೆ ನೀಡಿವೆ.
ಇದು ಮಾತ್ರವಲ್ಲದೇ ಸ್ವತಃ ಅಮೆರಿಕದ ಗಾಲ್ಫ್ ಅಸೋಸಿಯೇಷನ್ ಕೂಡ ಪಾಲ್ಮರ್ ಸಾವನ್ನು ಖಚಿತ ಪಡಿಸಿದ್ದು, ಅವರ ಆತ್ಮಕ್ಕೆ ಶಾಂತಿ ಕೋರಿ ಟ್ವೀಟ್ ಮಾಡಿದೆ. ಅಮೆರಿಕ ಗಾಲ್ಫ್ ದಂತಕಥೆ ಅರ್ನಾಲ್ಡ್ ಪಾಲ್ಮರ್ ಅವರು ತಮ್ಮ ಸುದೀರ್ಘ ವೃತ್ತಿಪರ ಗಾಲ್ಫ್ ನಲ್ಲಿ ವಿಶ್ವಾದ್ಯಂತ ಸುಮಾರು 90ಕ್ಕೂ ಅಧಿಕ ಟೂರ್ನಮೆಂಟ್ ಗಳನ್ನು ಜಯಿಸಿದ್ದರು. ಅಲ್ಲದೆ ಉದಯೋನ್ಮುಖ ಗಾಲ್ಫರ್ ಗಳಿಗೂ ಕೂಡ ಪಾಲ್ಮರ್ ಸ್ಪೂರ್ತಿಯಾಗಿದ್ದರು.
ಪಾಲ್ಮರ್ ನಿಧನಕ್ಕೆ ವಿಶ್ವದ ಖ್ಯಾತ ಗಾಲ್ಫ್ ಆಟಗಾರರು ಕಂಬನಿ ಮಿಡಿದಿದ್ದುಸ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
Advertisement