ಗ್ರೇಟ್ ಖಲಿ ಬಳಿಕ ಡಬ್ಲ್ಯೂಡಬ್ಲ್ಯೂಇ ಚಾಂಪಿಯನ್ ಆದ ಎರಡನೇ ಭಾರತೀಯ ಜಿಂದರ್ ಮಹಲ್
ನವದೆಹಲಿ: ಖ್ಯಾತ ರೆಸ್ಲಿಂಗ್ ಟೂರ್ನಿ ಡಬಲ್ಯೂಡಬಲ್ಯೂಇ ನೂತನ ಚಾಂಪಿಯನ್ ಆಗಿ ಭಾರತದ ಜಿಂದರ್ ಮಹಲ್ ಹೊರಹೊಮ್ಮಿದ್ದು, ಈ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಇತ್ತೀಚೆಗೆ ನಡೆದ ಡಬಲ್ಯೂಡಬಲ್ಯೂಇ ಸ್ಮ್ಯಾಕ್ ಡೌನ್ ಚಾಂಪಿಯನ್ ಷಿಪ್ ಪಂದ್ಯದಲ್ಲಿ 13 ಬಾರಿ ಚಾಂಪಿಯನ್ ರಾರಯಂಡಿ ಓರ್ಟನ್ ಅವರನ್ನು ಮಣಿಸುವ ಮೂಲಕ ಮಹಲ್ ಪ್ರಶಸ್ತಿ ಬೆಲ್ಟ್ ಅನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ಮೂಲಕ ಈ ಪ್ರಶಸ್ತಿ ಗೆದ್ದ ಭಾರತದ 2ನೇ ವೃತ್ತಿಪರ ರೆಸ್ಲರ್ ಎಂಬ ಖ್ಯಾತಿಗೂ ಮಹಲ್ ಪಾತ್ರರಾಗಿದ್ದಾರೆ. ಈ ಹಿಂದೆ 2007ರಲ್ಲಿ ಭಾರತದ ಗ್ರೇಟ್ ಖಲಿ ಹೆವಿ ವೇಯ್ಟ್ ಚಾಂಪಿಯನ್ ಷಿಪ್ ಬೆಲ್ಟ್ ಗೆದ್ದಿದ್ದರು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಂದರ್ ಮಹಲ್, ಅಂತಾರಾಷ್ಟ್ರೀಯ ವೇದಿಕೆಯೊಂದರಲ್ಲಿ ಭಾರತ ದೇಶವನ್ನು ಪ್ರತಿನಿಧಿಸುವುದೇ ದೊಡ್ಡ ಗೌರವ. ಅದೂ ಕೂಡ ಪ್ರಶಸ್ತಿಯೊಂದಿಗೆ ನಿಲ್ಲುವುದು ನನ್ನ ಕನಸಾಗಿತ್ತು. ಇದೀಗ ಅದು ನನಸಾಗಿದೆ ಎಂದು ಮಹಲ್ ತಿಳಿಸಿದ್ದಾರೆ. "ಈ ಫಲಿತಾಂಶಕ್ಕಾಗಿ ಸತತ 15 ವರ್ಷಗಳ ಪರಿಶ್ರಮ ವಹಿಸಿದ್ದು, ಕೊನೆಗೂ ತಮ್ಮ ಕನಸು ನನಸಾಗಿದೆ. 15 ವರ್ಷ ವಯಸ್ಸಿದ್ದಾಗ ಪ್ರತಿ ದಿನ ಒಂದೂವರೆ ಗಂಟೆಗಳ ಕಾಲ ಬಸ್ ಪ್ರಯಾಣ ಮಾಡಿ ಕುಸ್ತಿ ಅಖಾಡಕ್ಕೆ ತೆರಳುತ್ತಿದ್ದೆ. ಅಲ್ಲಿ 20-30 ವರ್ಷ ವಯಸ್ಸಿನ ಹಿರಿಯ ಕುಸ್ತಿ ಪಟುಗಳ ಜತೆ ಅಭ್ಯಾಸ ನಡೆಸುತ್ತಿದ್ದೆ. ಅಭ್ಯಾಸದ ವೇಳೆ ಎಷ್ಟೇ ಏಟಾದರೂ, ಗಾಯಗೊಂಡರೂ ಒಂದು ದಿನವೂ ಅಭ್ಯಾಸ ತಪ್ಪಿಸಿಕೊಳ್ಳುತ್ತಿರಲಿಲ್ಲ ಎಂದು ಮಹಲ್ ಹೇಳಿದ್ದಾರೆ.
ಡಬ್ಲುಡಬ್ಲುಇನ ಆರಂಭದ ದಿನಗಳಲ್ಲಿ ಯಶಸ್ಸು ಸಾಧಿಸಿದ್ದ ಅವರನ್ನು ಆನಂತರ ದಿಢೀರನೆ ಕೈಬಿಡಲಾಗಿತ್ತು. ಆದರೆ ಕಳೆದ ವರ್ಷವಷ್ಟೇ ಅವರು ಮತ್ತೊಮ್ಮೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಕೇವಲ ಒಂದು ವರ್ಷ ಅವಧಿಯಲ್ಲಿ ಮಹಲ್ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ. ‘‘ಮೊದಲ ಅವಕಾಶದಲ್ಲಿ ಆದ ಗೊಂದಲಗಳು, ಅವಮಾನಗಳಿಂದ ಕುಗ್ಗಿ ಹೋಗಿದ್ದೆ, ಆದರೆ 2ನೇ ಅವಕಾಶವನ್ನು ಕೈಚೆಲ್ಲಲು ನಾನು ಸಿದ್ಧನಿರಲಿಲ್ಲ. ಛಲ ಬಿಡದೆ ಹೋರಾಡಿದೆ. ಪರಿಶ್ರಮ ನನ್ನ ಕೈಹಿಡಿಯಿತು'' ಎಂದು ಮಹಲ್ ತಮ್ಮ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.