ಲಗೇಜ್ ಕಳೆದುಕೊಂಡ ಕಾಮನ್ ವೆಲ್ತ್ ಪದಕ ವಿಜೇತೆ ಮೌಮಾ ದಾಸ್, ಅಧಿಕಾರಿಗಳ ವಿರುದ್ಧ ಆಕ್ರೋಶ

ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದಿದ್ದ ಟೇಬಲ್ ಟೆನ್ನಿಸ್ ಆಟಗಾರ್ತಿ ಮೌಮಾ ದಾಸ್ ಲಗೇಜ್ ಇಲ್ಲದೇ ಮನೆಗೆ ವಾಪಸ್ ಆಗಿದ್ದು, ಭಾರತೀಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟೇಬಲ್ ಟೆನಿಸ್ ಆಟಗಾರ್ತಿ ಮೌಮಾ ದಾಸ್ (ಸಂಗ್ರಹ ಚಿತ್ರ)
ಟೇಬಲ್ ಟೆನಿಸ್ ಆಟಗಾರ್ತಿ ಮೌಮಾ ದಾಸ್ (ಸಂಗ್ರಹ ಚಿತ್ರ)
ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದಿದ್ದ ಟೇಬಲ್ ಟೆನ್ನಿಸ್ ಆಟಗಾರ್ತಿ ಮೌಮಾ ದಾಸ್ ಲಗೇಜ್ ಇಲ್ಲದೇ ಮನೆಗೆ ವಾಪಸ್ ಆಗಿದ್ದು, ಭಾರತೀಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವಾರ ಆಸ್ಟ್ರೇಲಿಯಾದಲ್ಲಿ ಅಂತ್ಯವಾಗಿದ್ದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪದಕ ಗೆಲ್ಲುವ ಮೂಲಕ ಭಾರತದ ಗೌರವ ಹೆಚ್ಚಿಸಿದ್ದ ಟೇಬಲ್ ಟೆನ್ನಿಸ್ ಆಟಗಾರ್ತಿ ಮೌಮಾದಾಸ್, ತಮ್ಮ ಲಗೇಜ್ ಇಲ್ಲದೇ ಮನೆಗೆ ವಾಪಾಸ್ ಆಗಿದ್ದಾರೆ. ಅರೇ ಇದೇನಿದು ಆಸ್ಟ್ರೇಲಿಯಾದಿಂದ ಬರುವಾಗ ಆಟಗಾರ್ತಿ ತಮ್ಮ ಲಗೇಜ್ ಕಳೆದುಕೊಂಡರೇ ಎಂದು ಭಾವಿಸಬೇಡಿ.. ಮೌಮಾ ದಾಸ್ ತಮ್ಮ ಲಗೇಡ್ ಕಳೆದುಕೊಂಡಿಲ್ಲ. ಬದಲಿಗೆ ಲಗೇಜ್ ಸಮೇತರಾಗಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ಲಗೇಜ್ ಪರಿಶೀಲನೆ ನಡೆಸಿದ್ದ ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಸೂಕ್ತ ದಾಖಲೆಗಳಿಲ್ಲದ ಕಾರಣ ಅದನ್ನು ತಡೆ ಹಿಡಿದಿದ್ಜಾರೆ.
ಇನ್ನು ದೆಹಲಿ ಅಧಿಕಾರಿಗಳ ನಡೆ ವಿರುದ್ಧ ಮೌಮಾ ದಾಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ವಿಮಾನ ನಿಲ್ದಾಣದಿಂದಲೇ ಕ್ರೀಡಾ ಇಲಾಖೆಯ ಟ್ವಿಟರ್ ಖಾತೆಯಲ್ಲಿ ವಿಚಾರ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಶೀಘ್ರ ಲಗೇಜ್ ಮರಳುವಂತೆ ಸೂಚನೆ ನೀಡಿದ್ದಾರೆ.
ಇನ್ನು ಮೌಮಾ ದಾಸ್ ಅವರ ಲಗೇಜ್ ನಲ್ಲಿ ಆಸ್ಟ್ರೇಲಿಯಾದಲ್ಲಿ ಗೆದ್ದ ಪದಕಗಳು, ಮೊಮೆಂಟೋಗಳು ಮತ್ತು ಇತರೆ ಅಮೂಲ್ಯ ವಸ್ತುಗಳು ಇದ್ದವು. ಅಲ್ಲದೆ ನನ್ನ ಕ್ರೀಡಾ ಕಿಟ್ ಕೂಡ ಅದರಲ್ಲೇ ಇತ್ತು.  ನನ್ನ ಲಗೇಜ್ ನಲ್ಲಿ ಆಕ್ಷೇಪಾರ್ಹ ವಸ್ತುಗಳು ಏನೂ ಇರಲಿಲ್ಲ. ಅಧಿಕಾರಿಗಳು ಹೇಳುವಂತೆ ಪವಕ್ ಬ್ಯಾಂಕ್ ಇತ್ತು ಎಂಬುದು ಸುಳ್ಳು ಏಕೆಂದರೆ ನಾನು ಪವರ್ ಬ್ಯಾಂಕ್ ಬಳಕೆ ಮಾಡುವುದಿಲ್ಲ. ನನಗೀಗ ಅನುಮಾನ ವ್ಯಕ್ತವಾಗುತ್ತಿದ್ದು, ನಿಜಕ್ಕೂ ಅಧಿಕಾರಿಗಳು ನನ್ನ ಲಗೇಜ್ ಅನ್ನು ಪರಿಶೀಲಿಸಿದರೇ ಅಥವಾ ಬೇರೊಬ್ಬರ ಲಗೇಜ್ ಪರಿಶೀಲನೆ ಮಾಡಿದರೆ?
ಮುಂಬರುವ ಸ್ವೀಡನ್ ಟೂರ್ನಿಗಾಗಿ ನಾನು ಅಭ್ಯಾಸ ನಡೆಸಬೇಕಿದೆ. ಆದರೆ ಕಿಟ್ ಇಲ್ಲದೇ ನಾನು ಅಭ್ಯಾಸ ನಡೆಸಲು ಸಾಧ್ಯವಿಲ್ಲ. ಹೀಗಾಗಿ ನನಗೆ ಲಗೇಜ್ ನ ಅವಶ್ಯಕತೆ ಇದ್ದು, ಸ್ವೀಡನ್ ಟೂರ್ನಿ ಆರಂಭಕ್ಕೂ ಮೊದಲೇ ನನಗೆ ನನ್ನ ಲಗೇಜ್ ಬೇಕು ಎಂದು ಮೌಮಾ ದಾಸ್ ಆಗ್ರಹಿಸಿದ್ದಾರೆ. 
ದೆಹಲಿಯಲ್ಲಿ ಇಂದು ಬೆಳಗ್ಗೆ 5.30ರ ಸುಮಾರಿನಲ್ಲಿ ಇಳಿದ ಟೇಬಲ್ ಟೆನ್ನಿಸ್ ತಂಡ ದೆಹಲಿಯಲ್ಲಿ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು, ಬಳಿಕ ಆಟಗಾರ್ತಿ ಮೌಮಾ ದಾಸ್, ಬೆಳಗ್ಗೆ 10.30ರಲ್ಲಿ ಜೆಟ್ ಏರ್ ಲೈನ್ಸ್ ವಿಮಾನದ ಮೂಲಕ ಕೋಲ್ಕತಾಗೆ ಪ್ರಯಾಣ ಬೆಳೆಸಬೇಕಿತ್ತು. ಆದರೆ ದೆಹಲಿ ಕಸ್ಟಮ್ಸ್ ಅಧಿಕಾರಿಗಳು ಅವರ ಲಗೇಜ್ ತಡೆ ಹಿಡಿದಿದ್ದಾರೆ.
ಇನ್ನು ಆಸ್ಟ್ರೇಲಿಯಾದಲ್ಲಿ ಕೊನೆಗೊಂಡ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಟೇಬಲ್ ಟೆನಿಸ್ ತಂಡ ಒಟ್ಟು 3 ಚಿನ್ನ, 2 ಬೆಳ್ಳಿ ಮತ್ತು 3 ಕಂಚಿನ ಪದಕ ಗಳಿಸಿದೆ. ಸ್ವತಃ ಮೌಮಾ ದಾಸ್ ಟೇಬಲ್ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com