ಫುಟ್ಬಾಲ್: ಅನುಭವ ಹಂಚಿಕೊಳ್ಳುವ ಮೂಲಕ ಕೇರಳ ತಂಡಕ್ಕೆ ಸಚಿನ್ ಸ್ಪೂರ್ತಿ!

ಭಾರತದ ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೇವಲ ಕ್ರಿಕೆಟಿಗರಿಗೆ ಮಾತ್ರವಲ್ಲ ಫುಟ್ಬಾಲಿಗರಿಗೂ ಸೂರ್ತಿಯಾಗಿದ್ದಾರೆ.
ಕೇರಳ ತಂಡದೊಂದಿಗೆ ಸಚಿನ್
ಕೇರಳ ತಂಡದೊಂದಿಗೆ ಸಚಿನ್
ನವದೆಹಲಿ: ಭಾರತದ ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೇವಲ ಕ್ರಿಕೆಟಿಗರಿಗೆ ಮಾತ್ರವಲ್ಲ ಫುಟ್ಬಾಲಿಗರಿಗೂ ಸೂರ್ತಿಯಾಗಿದ್ದಾರೆ.
ಹೌದು..ಈ ಮಾತನ್ನು ನಾವು ಹೇಳುತ್ತಿರುವುದಲ್ಲ. ಇಂಗ್ಲೆಂಡ್ ತಂಡದ ಮಾಜಿ ಫುಟ್ಬಾಲ್ ಆಟಗಾರ ಡೇವಿಡ್ ಜೇಮ್ಸ್ ಅವರ ಹೇಳಿಕೆ. ಪ್ರಸ್ತುತ ನಡೆಯುತ್ತಿರುವ ಐಎಸ್ ಎಲ್ ಟೂರ್ನಿಯ ಕೇರಳ ಬ್ಲಾಸ್ಟರ್ಸ್ ತಂಡದ ಮುಖ್ಯ ಕೋಚ್ ಕೂಡ ಆಗಿರುವ ಡೇವಿಡ್ ಜೇಮ್ಸ್ ಅವರು ತಮ್ಮ ತಂಡದ  ಮಾಲೀಕ ಸಚಿನ್ ತೆಂಡೂಲ್ಕರ್ ಅವರ ಕ್ರೀಡಾ ಸ್ಪೂರ್ತಿಯನ್ನು ಹಾಡಿ ಹೊಗಳಿದ್ದಾರೆ.
ಗುರುವಾರ ಮಾತನಾಡಿದ ಡೇವಿಡ್ ಜೇಮ್ಸ್ ಅವರು, ನಿಜಕ್ಕೂ ಸಚಿನ್ ತೆಂಡೂಲ್ಕರ್ ರಂತಹ ಕ್ರೀಡಾಪಟು ತಂಡದ ಮಾಲೀಕರಾಗಿರುವುದು ನಿಜಕ್ಕೂ ನಮಗೆ ಗೌರವದ ಸಂಗತಿಯಾಗಿದೆ. ತಂಡಕ್ಕೆ ಸಚಿನ್ ಸ್ಪೂರ್ತಿಯ ಚಿಲುಮೆಯಾಗಿದ್ದು, ಅಗತ್ಯ ಬಿದ್ದಾಗಲೆಲ್ಲಾ ಆಟಗಾರರನ್ನು ಹುರಿದುಂಬಿಸುವ ಕೆಲಸ ಮಾಡುತ್ತಿರುತ್ತಾರೆ. ತಂಡ ಒತ್ತಡಕ್ಕೆ ಸಿಲುಕಿದಾಗಲೆಲ್ಲಾ ತಂಡದ ಆಟಗಾರರೊಂದಿಗೆ ಖುದ್ಧಾಗಿ ಮಾತನಾಡಿ ಒತ್ತಡ ನಿವಾರಿಸುತ್ತಾರೆ. ಅವರ ಶಾಂತ ಚಿತ್ತ ಮತ್ತು ತಾಳ್ಮೆಯೇ ನಮಗೆಲ್ಲರಿಗೂ ಸ್ಪೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆ.
ಅಂತೆಯೇ ತಂಡಕ್ಕೆ ಆಸರೆಯಾಗುವ ಸಚಿನ್ ಗುಣದ ಬಗ್ಗೆ ಮಾತನಾಡಿದ ಜೇಮ್ಸ್, ಸಚಿನ್ ತಂಡದ ಆಟಗಾರರೊಂದಿಗೆ ತಮ್ಮ ಕ್ರಿಕೆಟ್ ಜೀವನ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ತಂಡ ಒತ್ತಡಕ್ಕೆ ಒಳಗಾದಗಲೆಲ್ಲಾ ಅವರು ತಂಡದ ಬೆನ್ನಿಗೆ ನಿಲ್ಲುತ್ತಾರೆ. ನನಗಿನ್ನೂ ನೆನಪಿದೆ 2014ರ ಐಎಸ್ ಎಲ್ ಟೂರ್ನಿಯಲ್ಲಿ ನಾವು ಮುಂಬೈ ಪಂದ್ಯದಲ್ಲಿ ಸೋತಿದ್ದೆವು. 94ನೇ ನಿಮಿಷದಲ್ಲಿ ಗೋಲು ಬಾರಿಸಿದ್ದರೂ ನಾವು ಪಂದ್ಯ ಕಳೆದುಕೊಂಡಿದ್ದವು. ಆಗ ನಾನು ನಿಜಕ್ಕೂ ತೀವ್ರ ಅಸಮಾಧಾನಗೊಂಡಿದ್ದೆ. ಆಗ ನನ್ನನ್ನು ಶಾಂತಗೊಳಿಸಿದ್ದೇ ಸಚಿನ್ ತೆಂಡೂಲ್ಕರ್ ಅವರು, ಆಗ ಅವರು ತಮ್ಮ ಐಪಿಎಲ್ ಫೈನಲ್ ಪಂದ್ಯದಲ್ಲಿ ತಮಗಾದ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರು. ಮುಂಬೈ ಇಂಡಿಯನ್ಸ್ ಪರವಾಗಿ ತವರು ಕ್ರೀಡಾಂಗಣದಲ್ಲೇ ಸಚಿನ್ ತಂಡ ಚೈನ್ನೈ ವಿರುದ್ಧ ಸೋತಿತ್ತು. ಈ ಪಂದ್ಯದ ಉದಾಹರಣೆ ನೀಡಿ ಸಚಿನ್ ನಮ್ಮನ್ನು ಶಾಂತ ಗೊಳಿಸಿದ್ದರು. 
ಇದೇ ರೀತಿಯ ಶಾಂತಚಿತ್ತ ಮನೋಭಾವವನ್ನು ಸಚಿನ್ ಅವರಿಂದ ನಾನು ಮುಂದೇ ಭಾವಿಸುತ್ತೇನೆ. ಅವರ ಶಾಂತಚಿತ್ತವೇ ತಂಡದ ಆಟಗಾರರಿಗೆ ಸ್ಪೂರ್ತಿಯಾಗುತ್ತದೆ. ಸಚಿನ್ ಕೂಡ ತಮ್ಮ ಕ್ರಿಕೆಟ್ ಜೀವನದಲ್ಲಿ ಸಾಕಷ್ಟು ಏಳು ಬೀಳು ಕಂಡಿರುತ್ತಾರೆ ಎಂದು ಡೇವಿಡ್ ಜೇಮ್ಸ್ ಹೇಳಿದ್ದಾರೆ.
ಇನ್ನು ಹಾಲಿ ವರ್ಷದ ಐಎಸ್ ಎಲ್ ಸರಣಿಯಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಪ್ರದರ್ಶನ ನಿರಾಶಾದಾಯಕವಾಗಿದ್ದು,  17 ಪಂದ್ಯಗಳಿಂದ ಕೇರಳ ಬ್ಲಾಸ್ಟರ್ಸ್ ತಂಡ 25 ಅಂಕಗಳನ್ನು ಸಂಪಾದಿಸಿದೆ. ಅಂತೆಯೇ ಇಂದು ಬೆಂಗಳೂರು ಎಫ್ ಸಿ ವಿರುದ್ಧ ನಿರ್ಣಾಯಕ ಪಂದ್ಯವನ್ನಾಡುತ್ತಿದ್ದು, ಈ ಪಂದ್ಯ ಕೇರಳ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com