ಬೈಕ್ ರೇಸಿಂಗ್ ನಲ್ಲಿ ಬೆಂಗಳೂರಿನ ಯುವಕನ ಸಾಧನೆ: ಪ್ರಾಯೋಜಕತ್ವದ ನಿರೀಕ್ಷೆಯಲ್ಲಿ ಯುವ ಕ್ರೀಡಾಪಟು ಉಲ್ಲಾಸ್

ಚೆನ್ನೈನಲ್ಲಿ ಡಿಸೆಂಬರ್ 11ರಿಂದ 20ರವರೆಗೆ ನಡೆದ ಅಖಿಲ ಭಾರತ ಮೋಟಾರ್ ಬೈಕ್ ರೇಸಿಂಗ್ ನಲ್ಲಿ(165 ಸಿಸಿ ಸ್ಟಾಕ್) ಬೆಂಗಳೂರಿನ ಉಲ್ಲಾಸ್ ಸಂತೃಪ್ತ್(22) ರಾಷ್ಟ್ರೀಯ ಮಟ್ಟದಲ್ಲಿ 2ನೇ ಸ್ಥಾನವನ್ನು ಗಳಿಸಿದ್ದಾರೆ. 
ಉಲ್ಲಾಸ್ ಗೆ ಶಾಸಕರಿಂದ ಸನ್ಮಾನ
ಉಲ್ಲಾಸ್ ಗೆ ಶಾಸಕರಿಂದ ಸನ್ಮಾನ
Updated on

ಬೆಂಗಳೂರು: ಚೆನ್ನೈನಲ್ಲಿ ಡಿಸೆಂಬರ್ 11ರಿಂದ 20ರವರೆಗೆ ನಡೆದ ಅಖಿಲ ಭಾರತ ಮೋಟಾರ್ ಬೈಕ್ ರೇಸಿಂಗ್ ನಲ್ಲಿ(165 ಸಿಸಿ ಸ್ಟಾಕ್) ಬೆಂಗಳೂರಿನ ಉಲ್ಲಾಸ್ ಸಂತೃಪ್ತ್(22) ರಾಷ್ಟ್ರೀಯ ಮಟ್ಟದಲ್ಲಿ 2ನೇ ಸ್ಥಾನವನ್ನು ಗಳಿಸಿದ್ದಾರೆ. 

ಬೆಂಗಳೂರಿನಲ್ಲಿಂದು ಶಾಸಕ ಬೈರತಿ ಸುರೇಶ್ ಅವರು ಕ್ರೀಡಾಪಟು ಉಲ್ಲಾಸ್ ಸಂತೃಪ್ತ್ ಅವರನ್ನು ಸನ್ಮಾನಿಸಿ, ಶುಭ ಹಾರೈಸಿದರು.

ಬಳಿಕ ಮಾತನಾಡಿದ ಶಾಸಕರು, ಬೈಕ್ ರೇಸ್ ಅತ್ಯಂತ ಅಪಾಯಕಾರಿ ಕ್ರೀಡೆಯಾಗಿದ್ದು, ಇಂತಹ ಪಂದ್ಯದಲ್ಲಿ ಉಲ್ಲಾಸ್ ಸಂತೃಪ್ತ್ ಕರ್ನಾಟಕಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ. ಅವರಿಗೆ ರಾಜ್ಯದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಅವರ ಭವಿಷ್ಯ ಮತ್ತಷ್ಟು ಉಜ್ವಲವಾಗಲಿ ಎಂದು ಹೇಳಿದರು.

ಇತ್ತೀಚೆಗೆ ಯುವಕರು ರಸ್ತೆಗಳಲ್ಲೇ ವೀಲಿಂಗ್ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಹಲವು ಪ್ರಾಣಹಾನಿ ಕೂಡ ಸಂಭವಿಸಿದೆ. ಇಂತಹ ವೀಲಿಂಗ್ ಸರಿಯಲ್ಲ. ಈ ಕ್ರೀಡೆಯಲ್ಲಿ ಆಸಕ್ತಿ ಇರುವವರು ತರಬೇತಿ ಪಡೆದು, ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

ಉಲ್ಲಾಸ್ ಸಂತೃಪ್ತ್ ಮಾತನಾಡಿ, 2018ರಲ್ಲಿ ಬೈಕ್ ರೇಸ್ ಬಗ್ಗೆ ಆಸಕ್ತಿ ಮೂಡಿತು. 2019ರಲ್ಲಿ ತರಬೇತಿಗೆ ಸೇರಿ 2020ರಲ್ಲಿ ಈ ಸಾಧನೆ ಮಾಡಿದ್ದೇನೆ. 8 ರೇಸ್ ಗಳ ಪೈಕಿ 3ರಲ್ಲಿ ಗೆದ್ದು, 4ನೇ ರೇಸ್ ನಲ್ಲಿ 2ನೇ ಸ್ಥಾನ ಪಡೆದಿದ್ದೇನೆ. ಕೊನೆಯ ಪಂದ್ಯದಲ್ಲಿ ಒತ್ತಡಕ್ಕೊಳಗಾಗಿ ಅಪಘಾತವಾಗಿದ್ದರಿಂದ ಗುರಿ ತಲುಪಲು ಸಾಧ್ಯವಾಗಲಿಲ್ಲ. ಆದರೂ ಭಾರತದ ಮಟ್ಟದಲ್ಲಿ 2ನೇ ಸ್ಥಾನ ಪಡೆದಿದ್ದೇನೆ. ಇದಕ್ಕೆ ತರಬೇತುದಾರು ಮತ್ತು ಪೋಷಕರ ಬೆಂಬಲ ಕಾರಣ ಎಂದರು.

ಮುಂದಿನ ವರ್ಷ ಇನ್ನಷ್ಟು ಸಾಧನೆ ಮಾಡುವ ಗುರಿ ಹೊಂದಿದ್ದೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎಂಬ ಆಸೆ ಇದೆ. ಇದಕ್ಕಾಗಿ ಪ್ರಾಯೋಜಕತ್ವದ ಅಗತ್ಯವಿದ್ದು, ಕಂಪನಿಗಳ ಪ್ರಾಯೋಜಕತ್ವದ ನಿರೀಕ್ಷೆಯಲ್ಲಿದ್ದೇನೆ ಎಂದರು.

ಉಲ್ಲಾಸ್ ಅವರ ತಂದೆ ಅರುಣಾನಂದ ಮಾತನಾಡಿ, ಎರಡು ತಿಂಗಳ ವಿರಾಮದ ಬಳಿಕ ಮತ್ತೆ ಅಭ್ಯಾಸ ಆರಂಭಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಗುರಿಯನ್ನು ಉಲ್ಲಾಸ್ ಹೊಂದಿದ್ದು, ಯಾರಾದರೂ ಪ್ರಾಯೋಜಕತ್ವ ದೊರೆತರೆ ಇನ್ನಷ್ಟು ಸಹಕಾರಿಯಾಗಲಿದೆ ಎಂದರು.

ಚೆನ್ನೈನಲ್ಲಿ ನಡೆದ ಪಂದ್ಯ; ವಿವಿಧ ರಾಜ್ಯಗಳ ನಲವತ್ತಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಡಿಸೆಂಬರ್ 11, 2020 ಶುಕ್ರವಾರದಿಂದ ಸತತವಾಗಿ ಎರಡು ವಾರಗಳ ಕಾಲ ಬೈಕ್ ರೇಸ್ ಗಳು ಚೆನ್ನೈಯಲ್ಲಿ ನಡೆದಿದ್ದು, ಎಂಟು ಸುತ್ತುಗಳಲ್ಲಿ ಬೆಂಗಳೂರಿನ ಉಲ್ಲಾಸ್ ಸಂತೃಪ್ತ್ (22) ಸತತವಾಗಿ 3 ರೇಸ್ ಗಳಲ್ಲಿ ಮೊದಲನೆ ಸ್ಥಾನ ಗಳಿಸಿದ್ದಾರೆ. ಒಂದು ರೇಸಿನಲ್ಲಿ 2ನೇ ಸ್ಥಾನ ಗಳಿಸಿದ್ದು, ಒಟ್ಟು ಮೊತ್ತದ ಅಂಕಗಳಲ್ಲಿ ಅಖಿಲ ಭಾರತದ ಮಟ್ಟದಲ್ಲಿ 2ನೇ ಸ್ಥಾನವನ್ನು ಉಲ್ಲಾಸ್ ಗಳಿಸಿದ್ದಾರೆ. ಡಿಸೆಂಬರ್ 20ರಂದು ರೇಸ್ ಮುಕ್ತಾಯಗೊಂಡಿದೆ.

ಅರುಣಾನಂದ ಮತ್ತು ಲತಾ ದಂಪತಿಯ ಪುತ್ರನಾಗಿರುವ ಉಲ್ಲಾಸ್ ಸಂತೃಪ್ತ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಬೆಂಗಳೂರಿನ ರಾಜಾಜಿನಗರದ ವೆಂಕಟ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಪಡೆದಿದ್ದಾರೆ. ತನ್ನ 14 ವರ್ಷದಲ್ಲೇ ಬೈಕ್ ರೇಸ್ ಬಗ್ಗೆ ತೀವ್ರ ಕುತೂಹಲ ಮತ್ತು ಆಸಕ್ತಿ ಹೊಂದಿದ ಉಲ್ಲಾಸ್ ಗೆ ತಂದೆ ಅರುಣ್ ಬೆಂಬಲವಾಗಿ ನಿಂತು ಪ್ರೋತ್ಸಾಹ ನೀಡುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com