ಉದ್ದೀಪನ ಮದ್ದು ಸೇವನೆ: ಪ್ರಕರಣದಿಂದ ವೇಟ್‌ಲಿಫ್ಟರ್‌ ಸಂಜಿತಾ ಚಾನು ಆರೋಪ ಮುಕ್ತ

ಉದ್ದೀಪನ ಮದ್ದು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೇಟ್‌ಲಿಫ್ಟರ್‌ ಸಂಜಿತಾ ಚಾನು ಆರೋಪ ಮುಕ್ತವಾಗಿದ್ದಾರೆ.

Published: 11th June 2020 12:25 AM  |   Last Updated: 11th June 2020 12:25 AM   |  A+A-


Weightlifter Sanjita Chanu

ಸಂಜಿತಾ ಚಾನು

Posted By : Srinivasamurthy VN
Source : PTI

ನವದೆಹಲಿ: ಉದ್ದೀಪನ ಮದ್ದು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೇಟ್‌ಲಿಫ್ಟರ್‌ ಸಂಜಿತಾ ಚಾನು ಆರೋಪ ಮುಕ್ತವಾಗಿದ್ದಾರೆ.

ಭಾರತದ ವೇಟ್‌ಲಿಫ್ಟರ್‌ ಸಂಜಿತಾ ಚಾನು ಅವರ ಮೇಲಿದ್ದ ಉದ್ದೀಪನ ಮದ್ದು ಸೇವನೆ ಪ್ರಕರಣವನ್ನು ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ (ಐಡಬ್ಲ್ಯುಎಫ್‌) ಕೈಬಿಟ್ಟಿದ್ದು, ಸಂಜಿತಾ ಚಾನು ಅವರ ಮೇಲಿನ ಆರೋಪ ‘ದೃಢೀಕೃತವಲ್ಲ’ ಎಂದು ಹೇಳಿದೆ. ವಿಶ್ವ ಉದ್ದೀಪನ ಮದ್ದು ಸೇವನೆ ತಡೆ ಘಟಕದ (ವಾಡಾ) ಶಿಫಾರಸಿನ ಆಧಾರದ ಮೇಲೆ ಐಡಬ್ಲ್ಯುಎಫ್‌ ಈ ನಿರ್ಧಾರಕ್ಕೆ ಬಂದಿದೆ.

ಐಡಬ್ಲ್ಯುಎಫ್‌ನ ಕಾನೂನು ಸಲಹೆಗಾರ್ತಿ ಲಿಲ್ಲಾ ಸಾಗಿ ಅವರ ಸಹಿ ಹೊಂದಿರುವ ಇ–ಮೇಲ್‌ ಮೂಲಕ ಚಾನು ಅವರಿಗೆ ಅಂತಿಮ ತೀರ್ಪಿನ ಮಾಹಿತಿ ನೀಡಲಾಗಿದೆ. ಚಾನು ಅವರಿಂದ ಸಂಗ್ರಹಿಸಿದ್ದ ಪರೀಕ್ಷಾ ಮಾದರಿಯಲ್ಲಿ ಉದ್ದೀಪನ ಮದ್ದಿನ ಅಂಶವಿರುವುದು ದೃಢಪಟ್ಟಿಲ್ಲ ಎಂದು ಮೇ 28ರಂದು ವಾಡಾ, ಐಡಬ್ಲ್ಯುಎಫ್‌ಗೆ ಹೇಳಿದೆ’ ಎಂದು ಇ–ಮೇಲ್‌ನಲ್ಲಿ ತಿಳಿಸಲಾಗಿದೆ. ಡೋಪಿಂಗ್‌ ಪ್ರಕರಣದಿಂದ ಅಧಿಕೃತವಾಗಿ ಮುಕ್ತಿ ಸಿಕ್ಕಿರುವುದು ಸಂತಸ ತಂದಿದೆ. ಆದರೆ ಈ ಕಾರಣದಿಂದ ನಾನು ಕಳೆದುಕೊಂಡ ಅವಕಾಶಗಳ ಕತೆಯೇನು? ಅನುಭವಿಸಿದ ಹಾಗೂ ಅನುಭವಿಸುತ್ತಿರುವ ಮಾನಸಿಕ ಯಾತನೆಗೆ ಹೊಣೆ ಯಾರು?’ ಎಂದು ಮಣಿಪುರದಲ್ಲಿರುವ ಚಾನು ಪ್ರಶ್ನಿಸಿದ್ದಾರೆ.

ಅಸಮಾಧಾನ ಹೊರ ಹಾಕಿ, ಪರಿಹಾರ ಕೋರಿದ ಸಂಜಿತಾ ಚಾನು
ಆದರೆ ಸಂಜಿತಾ ಅವರು ಪ್ರಕರಣದ ಕಾರಣ ತಾವು ಅನುಭವಿಸಿದ ನೋವಿಗೆ ಕ್ಷಮೆ ಹಾಗೂ ಪರಿಹಾರದ ಬೇಡಿಕೆ ಇಟ್ಟಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನನ್ನ ಅವಕಾಶವನ್ನು ಐಡಬ್ಲ್ಯುಎಫ್‌ ಕಸಿದುಕೊಂಡಿತು ಎಂದು ಅವರು ಕಿಡಿಕಾರಿದ್ದಾರೆ. ಆರಂಭದಿಂದಲೂ ‘ನಾನು ಅಮಾಯಕಳು’ ಎಂದು 26 ವರ್ಷದ ಸಂಜಿತಾ ಹೇಳುತ್ತಲೇ ಬಂದಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಜಿತಾ ಚಾನು ಅವರು, ಅಂತಿಮ ತೀರ್ಪು ಹೊರಬೀಳದೆ ಒಬ್ಬ ಅಥ್ಲೀಟ್‌ನನ್ನು ವರ್ಷಗಳ ಕಾಲ ಅಮಾನತು ಮಾಡಲಾಗುತ್ತದೆ. ಕೊನೆಯಲ್ಲಿ ಒಂದು ದಿನ ಇ–ಮೇಲ್‌ ಮೂಲಕ ನೀವು ಪ್ರಕರಣದಿಂದ ಮುಕ್ತರಾಗಿದ್ದೀರಿ ಎಂದು ಹೇಳುತ್ತೀರಿ. ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನನ್ನ ಅವಕಾಶವನ್ನು ಐಡಬ್ಲ್ಯುಎಫ್‌ ತನ್ನ ಜಡ ಮನೋಭಾವದಿಂದ ಕಸಿದುಕೊಂಡಿದೆ. ನನಗೆ ಕಿರುಕುಳ ನೀಡಿದ ತಪ್ಪಿಗೆ ಐಡಬ್ಲ್ಯುಎಫ್ ಕ್ಷಮೆ ಕೇಳಬೇಕು ಹಾಗೂ ಪರಿಹಾರ ನೀಡಬೇಕು. ಅಲ್ಲದೆ ನನ್ನ ಪ್ರಕರಣದ ಕುರಿತು ಸೂಕ್ತ ವಿವರಣೆ ನೀಡಬೇಕು. ಇದಕ್ಕೆ ಕಾರಣವಾದ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ಶಿಕ್ಷೆಯಾಗಲೇಬೇಕು. ಈ ಕುರಿತು ಮೇಲ್ಮನವಿ ಸಲ್ಲಿಸಿ ಪರಿಹಾರಕ್ಕೆ ಬೇಡಿಕೆ ಇಡುತ್ತೇನೆ ಎಂದು ಹೇಳಿದ್ದಾರೆ.

ಇನ್ನು 2017ರ ನವೆಂಬರ್‌ನಲ್ಲಿ ಸಂಜಿತಾ ಅವರಿಂದ ಪರೀಕ್ಷೆಗಾಗಿ ಮಾದರಿಯನ್ನು ಸಂಗ್ರಹಿಸಲಾಗಿತ್ತು. 2018ರ ಮೇ 15ರಿಂದ 2019ರ ಜನವರಿ 22ರ ವರೆಗೆ ಸಂಜಿತಾ ಅವರನ್ನು ಅಮಾನತುಗೊಳಿಸಲಾಗಿತ್ತು. ನಂತರ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. 2014 ಮತ್ತು 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಾನು ಚಿನ್ನ ಗಳಿಸಿದ್ದರು.

Stay up to date on all the latest ಕ್ರೀಡೆ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp