ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಮಹಿಳಾ ಈಜುಗಾರ್ತಿ ಮಾನಾ ಪಟೇಲ್!
ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ಗೆ ಶುಕ್ರವಾರ ಅರ್ಹತೆ ಪಡೆದ ಮೊದಲ ಮಹಿಳಾ ಮತ್ತು ಮೂರನೇ ಭಾರತೀಯ ಈಜುಗಾರ ಎಂಬ ಹೆಗ್ಗಳಿಕೆಗೆ ಈಜುಗಾರ್ತಿ ಮಾನಾ ಪಟೇಲ್ ಪಾತ್ರರಾಗಿದ್ದಾರೆ. ಪಟೇಲ್ ಯುನಿವರ್ಸಾಲಿಟಿ ಕೋಟಾದಡಿಯಲ್ಲಿ ಈ ಸ್ಥಾನ ಪಡೆದಿದ್ದಾರೆಂದು ತಿಳಿದುಬಂದಿದೆ.
ಶ್ರೀಹರಿ ನಟರಾಜ್ ಮತ್ತು ಸಾಜನ್ ಪ್ರಕಾಶ್ ಬಳಿಕ ಟೋಕಿಯೋ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತದ ಮೂರನೇ ಭಾರತೀಯ ಈಜುಗಾರ್ತಿ ಎಂಬ ಹೆಗ್ಗಳಿಕೆ ಮಾನಾ ಪಾತ್ರರಾಗಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು, ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಮಹಿಳಾ ಮತ್ತು 3ನೇ ಭಾರತೀಯ ಈಜುಗಾರ್ತಿ ಮಾನಾ ಪಟೇಲ್ಗೆ ಶುಭಾಶಯ ಎಂದು ಹೇಳಿದ್ದಾರೆ.
ಈ ನಡುವೆ ಕರ್ನಾಟಕ ರಾಜ್ಯದ ಈಜುಪಟು ಶ್ರೀಹರಿ ನಟರಾಜ್ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿದ್ದಾರೆ.
ಶ್ರೀಹರಿ ಇತ್ತೀಚೆಗಷ್ಟೇ ಇಟಲಿಯ ಚಾಂಪಿಯನ್‌ಶಿಪ್‌ನ ಟೈಮ್ ಟ್ರಯಲ್‌ನಲ್ಲಿ ‘ಎ’ ವಿಭಾಗದ ಸಮಯವನ್ನು ಸಾಧಿಸಿದ್ದರು. 100 ಮೀ. ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಅವರು ಸ್ಪರ್ಧಿಸಲಿದ್ದಾರೆ.
ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಮೂವರು ಈಜುಪಟುಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. 200 ಮೀಟರ್ ಬಟರ್‌ಪ್ಲೈ ವಿಭಾಗದಲ್ಲಿ ಸಾಜನ್ ಪ್ರಕಾಶ್ ನೇರ ಅರ್ಹತೆ ಪಡೆಯುವ ಮೂಲಕ ಸಾಧನೆ ಮಾಡಿದ್ದರು. ನಂತರ ಶ್ರೀಹರಿ ನಟರಾಜ್ ಅವರೂ ಅರ್ಹತೆ ಸಾಧಿಸಿದ್ದರು. ಇದೀಗ ಮಾನಾ ಪಟೇಲ್ ಅವರೂ ಕೂಡ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ