ಟೊಕಿಯೊ ಒಲಂಪಿಕ್ಸ್: ಕಂಚಿನ ಪದಕ ಗೆದ್ದ ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್
ಟೊಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದು ಭಾರತಕ್ಕೆ ಲಭಿಸುತ್ತಿರುವ ಮೂರನೇ ಪದಕವಾಗಿದೆ.
Published: 04th August 2021 11:36 AM | Last Updated: 04th August 2021 12:44 PM | A+A A-

ಲವ್ಲಿನಾ ಬೊರ್ಗೊಹೈನ್
ಟೊಕಿಯೊ: ಟೊಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದು ಭಾರತಕ್ಕೆ ಲಭಿಸುತ್ತಿರುವ ಮೂರನೇ ಪದಕವಾಗಿದೆ.
ಇಂದು ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಟರ್ಕಿಯಾದ ಬುಸೆನಾಜ್ ಸುರ್ಮೆನೆಲಿ ವಿರುದ್ಧ 5-0 ಅಂತರದಲ್ಲಿ ಸೋಲು ಕಾಣುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಮಹಿಳಾ ಬಾಕ್ಸಿಂಗ್ನ 69 ಕೆಜಿ ವಿಭಾಗದ ಸೆಮಿಫೈನಲ್ನಲ್ಲಿ ಲವ್ಲಿನಾ, ಎದುರಾಳಿ ಅಗ್ರ ಶ್ರೇಯಾಂಕಿತೆ ಟರ್ಕಿಯ ಬುಸೆನಾಜ್ ಸುರ್ಮೆನೆಲಿ ವಿರುದ್ಧ ತಿರುಗಿ ಬೀಳಲು ಸಾಧ್ಯವಾಗಲೇ ಇಲ್ಲ. ಬುಸೆನಾಜ್ ಅವರ ಆಕ್ರಮಣಕಾರಿ ಆಟಕ್ಕೆ ಸೋಲು ಅನುಭವಿಸಿದರು. ಆಗಲೇ ಸೆಮಿಫೈನಲ್ಗೆ ಪ್ರವೇಶಿಸುವ ಮೂಲಕ ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸಿದ್ದ ಲವ್ಲಿನಾ, ಚಿನ್ನದ ಪದಕ ಗುರಿಯನ್ನಿರಿಸಿದ್ದರು. ಆದರೆ ಅಂತಿಮ ನಾಲ್ಕರ ಘಟ್ಟದಲ್ಲಿ ಎಡವಿದ್ದಾರೆ.
ಇದಕ್ಕೂ ಮುನ್ನ ಟೋಕಿಯೋ ಒಲಂಪಿಕ್ಸ್ ಕ್ರೀಡಾ ಕೂಟದ ಮಹಿಳಾ ಬಾಕ್ಸಿಂಗ್‌ನಲ್ಲಿ ವಾಲ್ಟರ್ ಬೆಲ್ಟ್ 64 ರಿಂದ 69 ಕೆಜಿ ವಿಭಾಗದಲ್ಲಿ ನಡೆದ ಕ್ವಾರ್ಟರ್ಫೈನಲ್ ಕಾದಾಟದಲ್ಲಿ ಚೈನೀಸ್ ತೈಪೆಯ ಮಾಜಿ ಚಾಂಪಿಯನ್ ನಿಯೆನ್ ಚಿನ್ ಚೆನ್ ಅವರನ್ನು ಲವ್ಲಿನಾ ಬೊರ್ಗೊಹೈನ್ ಅವರು ಸೋಲಿಸಿ ನಾಲ್ಕರ ಘಟ್ಟಕ್ಕೆ ಕಾಲಿಟ್ಟಿದ್ದರು.
ಮೊದಲಿಗೆ ಮುಯಿತೈ ಪಟುವಾಗಿದ್ದ 23 ವರ್ಷದ ಲವ್ಲಿನಾ ಇದೀಗ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೂರನೇ ಬಾಕ್ಸರ್ ಆಗಿದ್ದಾರೆ. ವಿಜೇಂದರ್ ಸಿಂಗ್ (2008) ಮತ್ತು ಮೇರಿ ಕೋಮ್ (2012) ಮೊದಲಿಬ್ಬರು.
ಲವ್ಲಿನಾ ಬೊರ್ಗೊಹೈನ್ ಸೋತರೂ ವಿಶೇಷ ಸಾಧನೆ ಮಾಡಿದ್ದಾರೆ. ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆಲುವಿನ ಸನಿಹಕ್ಕೇರಿದ ಮೊದಲ ಭಾರತೀಯರೆನಿಸಲಿದ್ದಾರೆ.