ಈಜು ಸ್ಪರ್ಧೆಗಳಲ್ಲಿ ಛಾಪು ಮೂಡಿಸಿದ 11 ವರ್ಷದ ಬಾಲಕಿ ಧೀನಿಧಿ ಯಶೋಗಾಥೆ

ಆಕೆಗೆ ಈಗಿನ್ನೂ 11 ವರ್ಷ. ಆದರೆ ಗುರಿಯಲ್ಲಿ ಸ್ಪಷ್ಟತೆ ಹೊಂದಿರುವ ಧೀನಿಧಿ ದೇಸಿಂಗು ಅಗ್ರಗಣ್ಯ ಈಜುಗಾರ್ತಿಯಾಗಬೇಕು, ಒಲಂಪಿಕ್ಸ್  ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂಬ ಕನಸು ಹೊತ್ತಿರುವ ಬಾಲಕಿ. 
ಧೀನಿಧಿ
ಧೀನಿಧಿ

ಬೆಂಗಳೂರು: ಆಕೆಗೆ ಈಗಿನ್ನೂ 11 ವರ್ಷ. ಆದರೆ ಗುರಿಯಲ್ಲಿ ಸ್ಪಷ್ಟತೆ ಹೊಂದಿರುವ ಧೀನಿಧಿ ದೇಸಿಂಗು ಅಗ್ರಗಣ್ಯ ಈಜುಗಾರ್ತಿಯಾಗಬೇಕು, ಒಲಂಪಿಕ್ಸ್  ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂಬ ಕನಸು ಹೊತ್ತಿರುವ ಬಾಲಕಿ. ತನ್ನ ಕನಸನ್ನು ನನಸು ಮಾಡಿಕೊಳ್ಳುವುದಕ್ಕೆ ಈಗಿನಿಂದಲೇ ಕಠಿಣ ಪರಿಶ್ರಮದಲ್ಲಿ ತೊಡಗಿದ್ದಾಳೆ ಧೀನಿಧಿ.

ಬೆಂಗಳೂರಿನಲ್ಲಿ ನಡೆದ 37 ನೇ ಸಬ್ ಜೂನಿಯರ್ ಹಾಗೂ 47 ನೇ ಜ್ಯೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್ಷಿಪ್ ನಲ್ಲಿ 200 ಮೀಟರ್ ವೈಯಕ್ತಿಕ ಮೆಡ್ಲಿ ಹಾಗೂ 200 ಮೀ. ಫ್ರೀಸ್ಟೈಲ್ ನ ವಿಭಾಗಗಳಲ್ಲಿ ಈಕೆ ಎರಡು ರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸಿದ್ದಾಳೆ. ಧೀನಿಧಿ ಕಳೆದ ತಿಂಗಳು ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ತನ್ನ ವಯಸ್ಸಿನವರ ವಿಭಾಗದಲ್ಲಿ ಅತ್ಯುತ್ತಮ ಈಜುಗಾರ್ತಿಯಾಗಿದ್ದಾರೆ.

ತನ್ನ 8 ನೇ ವಯಸ್ಸಿನಿಂದಲೇ ಈಜುಕ್ರೀಡೆಯ ಅಭ್ಯಾಸ ಪ್ರಾರಂಭಿಸಿದ ಧೀನಿಧಿ ಕ್ರಮೇಣ ಹಿಡಿತ ಸಾಧಿಸಿದರು.

ಪ್ರಾರಂಭದಲ್ಲಿ ಗೋಲ್ಡನ್ ಸ್ವಿಮ್ಸ್ ನಲ್ಲಿ ತರಬೇತಿ ಪಡೆದ ಅವರು 2019 ರಲ್ಲಿ ಕೆನ್ಸಿಂಗ್ಟನ್ ನ ಡಾಲ್ಫಿನ್ ಅಕ್ವಾಟಿಕ್ಸ್ ಸೇರಿದರು. ಕೋವಿಡ್-19 ಸಾಂಕ್ರಾಮಿಕ ಪ್ರಾರಂಭವಾಗುವುದಕ್ಕೂ ಮುನ್ನ ಬೆಳಿಗ್ಗೆ 5 ಕ್ಕೆ ತಮ್ಮ ದೈನಂದಿನ ಈಜು ಅಭ್ಯಾಸವನ್ನು ಪ್ರಾರಂಭಿಸುತ್ತಿದ್ದ ಧೀನಿಧಿ ನಂತರ ಸಿ.ವಿ ರಾಮನ್ ನಗರದಲ್ಲಿರುವ ಕೇಂದ್ರೀಯ ವಿದ್ಯಾಲಯಕ್ಕೆ ತರಗತಿಗಳಿಗಾಗಿ ಶಾಲೆಗೆ ತೆರಳುತ್ತಿದ್ದರು. ಶಾಲೆಯಿಂದ ಮರಳಿದ ಬಳಿಕ ಮತ್ತೊಮ್ಮೆ ಈಜು ಅಭ್ಯಾಸ.

ಆದರೆ ಕೋವಿಡ್-19 ಎದುರಾದ ಪರಿಣಾಮ ಲಾಕ್ ಡೌನ್ ನಿಂದಾಗಿ ಧೀನಿಧಿಯ ತರಬೇತಿ 8 ತಿಂಗಳ ಕಾಲ ಸ್ಥಗಿತಗೊಂಡಿತ್ತು. ಮತ್ತೆ ಎಲ್ಲವೂ ಪುನಾರಂಭಗೊಂಡಾಗ ಧೀನಿಧಿ ರಾಷ್ಟ್ರೀಯ ಮಟ್ಟದ ಪಂದ್ಯಗಳಿಗಾಗಿ ತನ್ನ ಅಭ್ಯಾಸವನ್ನು ಮೊದಲಿನಿಂದ ತೀವ್ರವಾಗಿ ಪ್ರಾರಂಭಿಸಬೇಕಾಯಿತು.ಈಗ ಕಳೆದ ಒಂದು ತಿಂಗಳಿನಿಂದ ಆಕೆಯ ವೇಳಾಪಟ್ಟಿ ಅತ್ಯಂತ ವ್ಯಸ್ತವಾಗಿದೆ. ಕೆಲವೊಮ್ಮೆ ಆನ್ ಲೈನ್ ತರಗತಿಗಳನ್ನೂ ತಪ್ಪಿಸಿಕೊಳ್ಳುತ್ತಿದ್ದ ಧೀನಿಧಿಗೆ ತನ್ನ ಕನಸು ನನಸು ಮಾಡಿಕೊಳ್ಳುವುದಕ್ಕೆ ಶಾಲೆಯಲ್ಲಿ ಶಿಕ್ಷಕರ ಬೆಂಬಲವೂ ಇದೆ, ಕೆಲವು ತಿಂಗಳಿನಿಂದ ಧೀನಿಧಿ ತನ್ನ ತಂದೆಯ ಜೊತೆ ತರಬೇತಿಗೆ ತೆರಳುತ್ತಿದ್ದಾಳೆ ಎನ್ನುತ್ತಾರೆ ಆಕೆಯ ತಾಯಿ ಜೆಸಿತಾ ವಿ.

200 ಮೀ ಫ್ರೀ ಸ್ಟೈಲ್ ನಲ್ಲಿ ಧೀನಿಧಿ 2:24.94 ಸಮಯದ ಮೂಲಕ 11 ವರ್ಷದ ಹಿಂದಿನ ಮಹಾರಾಷ್ಟ್ರದ ಮೋನಿಕ್ ಗಾಂಧಿ ಅವರ ಹೆಸರಲ್ಲಿದ್ದ 2:17.52 ದಾಖಲೆಯನ್ನು ಮುರಿದಿದ್ದಾರೆ. ಗುರುವಾರದಂದು 2013 ರಲ್ಲಿ 200 ಮೀ. ವಿಭಾಗದಲ್ಲಿ ವನಿಯಾ ಕಪೂರ್ ಅವರ 2:37:99 ಸಮಯದ ದಾಖಲೆಯನ್ನು 2:33.36ರ ಮೂಲಕ ಧೀನಿಧಿ ಸರಿಗಟ್ಟಿದ್ದಾರೆ.

"ಕೋವಿಡ್-19 ಮುಕ್ತಾಯಗೊಂಡ ಬಳಿಕ ಹಿಂದಿನ ಸ್ಥಿತಿಗೆ ಮರಳುವುದು ಕಷ್ಟ ಸಾಧ್ಯವಾಯಿತು. ಸ್ಪರ್ಧಾತ್ಮಕವಾಗಿ ಈಜುವುದಕ್ಕೆ ಬಹಳಷ್ಟು ಸಮಯ ಹಿಡಿಸಿತು. ರಾಷ್ಟ್ರೀಯ ಮಟ್ಟದಲ್ಲಿನ ನನ್ನ ದಾಖಲೆ ನಿರ್ಮಾಣ ಸಂತಸ ಉಂಟುಮಾಡುತ್ತಿದೆ. ನನ್ನ ಶ್ರಮಕ್ಕೆ ಫಲ ದೊರೆತಿದೆ ಎನ್ನುತ್ತಾರೆ ಧೀನಿಧಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com