
ಬರ್ಮಿಂಗ್ಹ್ಯಾಮ್: ಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ಪ್ಯಾರಾ ಪವರ್ ಲಿಫ್ಟಿಂಗ್ನಲ್ಲಿ ಭಾರತದ ಸುಧೀರ್ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇನ್ನು ಲಾಂಗ್ಜಂಪ್ನಲ್ಲಿ ಮುರಳಿ ಶ್ರೀಶಂಕರ್ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದಾರೆ.
ಕಳೆದ ತಡರಾತ್ರಿ ನಡೆದ ಪುರುಷರ ಹೆವಿವೇಯ್ಟ್ ವಿಭಾಗದಲ್ಲಿ ಸುಧೀರ್ 134.5 ಅಂಕಗಳೊಂದಿಗೆ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಇತಿಹಾಸ ನಿರ್ಮಿಸಿದರು. ಈ ಮೂಲಕ ಭಾರತದ ಪದಕಗಳ ಸಂಖ್ಯೆ 20ಕ್ಕೇರಿದೆ. 87 ಕೆಜಿ ಇರುವ ಸುಧೀರ್ ತಮ್ಮ ಮೊದಲ ಪ್ರಯತ್ನದಲ್ಲಿ 208 ಕೆಜಿ ಭಾರ ಎತ್ತಿದರು. ಇನ್ನು ಎರಡನೇ ಪ್ರಯತ್ನದಲ್ಲಿ 212 ಕೆಜಿ ಎತ್ತಿ ದಾಖಲೆಯ 134.5 ಅಂಕಗಳನ್ನು ಗಳಿಸಿದರು. ಈ ಮೂಲಕ ಕಾಮನ್ ವೆಲ್ತ್ ಗೇಮ್ಸ್ 2022 ರಲ್ಲಿ ಚಿನ್ನದ ಪದಕವನ್ನು ಗೆದ್ದು ಬೀಗಿದರು.
ಇನ್ನು ಲಾಂಗ್ಜಂಪ್ನಲ್ಲಿ ಮುರಳಿ ಶ್ರೀಶಂಕರ್ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದಾರೆ. ವಿಶೇಷ ಎಂದರೆ ಮುರಳಿ ಕಾಮನ್ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ಕ್ರೀಡಾಪಟು ಆಗಿದ್ದಾರೆ. ಶ್ರೀಶಂಕರ್ 8.08ಮೀ ಜಿಗಿಯುವ ಮೂಲಕ ಪದಕ ಗೆದ್ದರು. ಇನ್ನು 1978ರಲ್ಲಿ ಸುರೇಶ್ ಬಾಬು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಂಚು ಗೆದ್ದಿದ್ದರು.
ಭಾರತೀಯ ಪುರುಷರ ಹಾಕಿ ತಂಡವು ವೇಲ್ಸ್ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ಗೆ ಎಂಟ್ರಿಕೊಟ್ಟಿದ್ದಾರೆ. ಸ್ಟಾರ್ ಡಿಫೆಂಡರ್ ಹರ್ಮನ್‌ಪ್ರೀತ್ ಸಿಂಗ್ ಅವರ ಅಮೋಘ ಹ್ಯಾಟ್ರಿಕ್ ಹಿನ್ನಲೆಯಲ್ಲಿ ಭಾರತ ತನ್ನ ಕೊನೆಯ ಪೂಲ್ ಬಿ ಪಂದ್ಯದಲ್ಲಿ ವೇಲ್ಸ್ ತಂಡವನ್ನು 4-1 ಗೋಲುಗಳಿಂದ ಸೋಲಿಸಿತು. ಪೂಲ್ ಹಂತದಲ್ಲಿ ಭಾರತ 4 ಪಂದ್ಯಗಳ ಪೈಕಿ 3 ಪಂದ್ಯ ಗೆದ್ದಿದ್ದರೆ 1 ಡ್ರಾ ಆಗಿತ್ತು.
ಭಾರತಕ್ಕೆ ಒಟ್ಟಾರೆ 20 ಪದಕಗಳು ಒಲಿದಿದ್ದು 6 ಚಿನ್ನ, 7 ಬೆಳ್ಳಿ ಹಾಗೂ 7 ಕಂಚಿನ ಪದಕ ಸೇರಿದೆ.
Advertisement