ಒಡಿಶಾ: ವಾರ್ಷಿಕ ಕ್ರೀಡಾಕೂಟದ ವೇಳೆ ವಿದ್ಯಾರ್ಥಿ ಕುತ್ತಿಗೆಗೆ ಚುಚ್ಚಿದ ಜಾವೆಲಿನ್

ಒಡಿಶಾದ ಬಲಂಗೀರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಶನಿವಾರ ನಡೆದ ವಾರ್ಷಿಕ ಕ್ರೀಡಾಕೂಟದ ವೇಳೆ ಸ್ಪರ್ಧಿ ಎಸೆದ ಜಾವೆಲಿನ್ ನಿಗದಿತ ಗುರಿಯೆಡೆಗೆ ಸಾಗದೇ ಬೇರೆ...
ಗಾಯಗೊಂಡ ವಿದ್ಯಾರ್ಥಿ
ಗಾಯಗೊಂಡ ವಿದ್ಯಾರ್ಥಿ

ಬಲಂಗೀರ್: ಒಡಿಶಾದ ಬಲಂಗೀರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಶನಿವಾರ ನಡೆದ ವಾರ್ಷಿಕ ಕ್ರೀಡಾಕೂಟದ ವೇಳೆ ಸ್ಪರ್ಧಿ ಎಸೆದ ಜಾವೆಲಿನ್ ನಿಗದಿತ ಗುರಿಯೆಡೆಗೆ ಸಾಗದೇ ಬೇರೆ ದಿಕ್ಕಿನತ್ತ ಸಾಗಿ 9ನೇ ತರಗತಿ ವಿದ್ಯಾರ್ಥಿಯ ಕುತ್ತಿಗೆಗೆ ಚುಚ್ಚಿದ್ದು, ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡ ವಿದ್ಯಾರ್ಥಿಯನ್ನು ಸದಾನಂದ ಮೆಹರ್ ಎಂದು ಗುರುತಿಸಲಾಗಿದ್ದು, ವಿದ್ಯಾರ್ಥಿ ಈಗ ಅಪಾಯದಿಂದ ಪಾರಾಗಿದ್ದಾನೆ.

ಅಗಲ್‌ಪುರ ಬಾಲಕರ ಪಂಚಾಯತ್ ಹೈಸ್ಕೂಲ್‌ನಲ್ಲಿ ಅಭ್ಯಾಸದ ವೇಳೆ ಮತ್ತೊಬ್ಬ ವಿದ್ಯಾರ್ಥಿ ಎಸೆದ ಜಾವೆಲಿನ್ ಮೆಹರ್‌ನ ಕುತ್ತಿಗೆಯ ಬಲಭಾಗಕ್ಕೆ ಚುಚ್ಚಿದೆ ಮತ್ತು ಅದು ಬಾಲಕನ ಎಡಭಾಗದಿಂದ ಹೊರಬಂದಿದೆ.

ಬಾಲಕನ ಗಲ್ಲದ ಕೆಳಗೆ ಸಿಲುಕಿಕೊಂಡಿದ್ದ ಜಾವೆಲಿನ್ ಅನ್ನು ಬಲಂಗಿರ್‌ನ ಭೀಮಾ ಭೋಯ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಅದನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಆದರೆ, ಇದೀಗ ಮೆಹರ್ ಅವರನ್ನು ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ.

"ಶಾಲೆಯಲ್ಲಿ ಕ್ರೀಡಾಕೂಟವಿತ್ತು ಮತ್ತು ಈ ಅಹಿತಕರ ಘಟನೆ ಸಂಭವಿಸಿದೆ. ಮಗು ಅಪಾಯದಿಂದ ಪಾರಾಗಿದೆ " ಎಂದು ಬಲಂಗೀರ್ ಜಿಲ್ಲಾಧಿಕಾರಿ ಚಂಚಲ್ ರಾಣಾ ಪಿಟಿಐಗೆ ತಿಳಿಸಿದ್ದಾರೆ.

ವಿದ್ಯಾರ್ಥಿಯ ಕುಟುಂಬಕ್ಕೆ ತಕ್ಷಣ 30 ಸಾವಿರ ರೂಪಾಯಿ ನೆರವು ನೀಡುವಂತೆ ಜಿಲ್ಲಾಧಿಕಾರಿ, ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಬಾಲಕನಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ ಮತ್ತು ಅದಕ್ಕೆ ಬೇಕಾದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com