36 ವರ್ಷಗಳ ಬಳಿಕ 3ನೇ ಬಾರಿ ಫಿಫಾ ವಿಶ್ವಕಪ್ ಗೆದ್ದ ಅರ್ಜೆಂಟೀನಾ, ಮೆಸ್ಸಿಗೆ ಗೆಲುವಿನ ವಿದಾಯ
ದೋಹಾ(ಕತಾರ್): ಕತಾರ್ ಲುಸೇಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ ರೋಚಕ ಗೆಲುವು ದಾಖಲಿಸಿದ್ದು, ಈ ಮೂಲಕ ಅರ್ಜೆಂಟೀನಾ 36 ವರ್ಷಗಳ ನಂತರ ಮೂರನೇ ಬಾರಿಗೆ ಫಿಫಾ ವಿಶ್ವಕಪ್ ಅನ್ನು ತನ್ನ ಮುಡಿಗೇರಿಸಿಕೊಂಡಿದೆ.
ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದ ಅರ್ಜೆಂಟೀನಾ, 23ನೇ ನಿಮಿಷದಲ್ಲಿ ಲಿಯೋನಲ್ ಮೆಸ್ಸಿ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ನಂತರ 36ನೇ ನಿಮಿಷದಲ್ಲಿ ಏಂಜಲ್ ಡಿ ಮಾರಿಯಾ ಮತ್ತೊಂದು ಗೋಲು ಬಾರಿಸಿದರು. ಈ ಮೂಲಕ ಅರ್ಜೆಂಟೀನಾ 2-0 ಗೋಲುಗಳಿಂದ ಮುನ್ನಡೆ ಸಾಧಿಸಿತ್ತು.
ಆದರೆ, ದ್ವಿತೀಯಾರ್ಧದಲ್ಲಿ ಫ್ರಾನ್ಸ್ ಪರ ಏಕಾಂಗಿ ಹೋರಾಟ ನಡೆಸಿದ ಸ್ಟಾರ್ ಆಟಗಾರ ಕಿಲಿಯನ್ ಎಂಬಾಪೆ ಎರಡು ನಿಮಿಷಗಳಲ್ಲಿ ಬ್ಯಾಕ್-ಟು-ಬ್ಯಾಕ್ ಗೋಲ್ ಬಾರಿಸಿ ಪೂರ್ಣ ಸಮಯದ ಅಂತ್ಯಕ್ಕೆ 2-2ರ ಸಮಬಲ ಸಾಧಿಸಿದರು. ಅಂತಿಮವಾಗಿ ಪೆನಾಲ್ಟಿ ಶೂಟ್-ಔಟ್‌ನಲ್ಲಿ ಫ್ರಾನ್ಸ್ ತಂಡವನ್ನು 4-2 ಗೋಲುಗಳ ಅಂತರದಲ್ಲಿ ಸೋಲಿಸುವ ಮೂಲಕ ಅರ್ಜೆಂಟೀನಾ ಮೂರನೇ ಬಾರಿಗೆ ವಿಶ್ವಕಪ್ ಎತ್ತಿಹಿಡಿದಿದೆ.
ಈ ವಿಶ್ವಕಪ್ ಗೆಲುವಿನೊಂದಿಗೆ ಮೆಸ್ಸಿ ತಮ್ಮ ಅಂತರಾಷ್ಟ್ರೀಯ ಫುಟ್ಬಾಲ್ ವೃತ್ತಿಜೀವನವನ್ನು ಅಂತ್ಯಗೊಳಿಸಿದ್ದಾರೆ. ಫೈನಲ್ ಪಂದ್ಯ ತನ್ನ ಅಂತರಾಷ್ಟ್ರೀಯ ವೃತ್ತಿ ಜೀವನದ ಕೊನೆಯ ಪಂದ್ಯವಾಗಲಿದೆ ಎಂದು ಮೆಸ್ಸಿ ಈಗಾಗಲೇ ಹೇಳಿದ್ದರು.
1978ರಲ್ಲಿ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಗೆದ್ದಿದ್ದ ಅರ್ಜೆಂಟೀನಾ, 1986ರಲ್ಲಿ ಡಿಯೇಗೊ ಮರಡೊನಾ ಸಾರಥ್ಯದಲ್ಲಿ ಎರಡನೇ ಬಾರಿ ವಿಶ್ವ ಕಪ್ ಗೆದ್ದಿತ್ತು. ಈಗ ಲಿಯೋನೆಲ್ ಮೆಸ್ಸಿ ಸಾರಥ್ಯದಲ್ಲಿ ಮತ್ತೊಮ್ಮೆ ಟ್ರೋಫಿ ಎತ್ತಿ ಹಿಡಿದು, ವಿಶ್ವಕಪ್ ಇತಿಹಾಸದಲ್ಲಿ ಮೂರನೇ ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ