ಕ್ರೀಡೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಮಗಳ ಸಾವಿನ ಸುದ್ದಿ ನ್ಯೂಸ್ ಚಾನಲ್‌ನಲ್ಲಿ ನೋಡಿ ಕುಸಿದುಬಿದ್ದ ತಂದೆ!

ನಾಗ್ಪುರದ ಆಸ್ಪತ್ರೆಯೊಂದರಲ್ಲಿ 10 ವರ್ಷದ ಮಲಯಾಳಿ ಸೈಕಲ್ ಪೋಲೋ ಆಟಗಾರ್ತಿ ನಿಗೂಢವಾಗಿ ಸಾವನ್ನಪ್ಪಿದ ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ಫಾತಿಮಾ ನಿದಾ
ಫಾತಿಮಾ ನಿದಾ

ನಾಗ್ಪುರದ ಆಸ್ಪತ್ರೆಯೊಂದರಲ್ಲಿ 10 ವರ್ಷದ ಮಲಯಾಳಿ ಸೈಕಲ್ ಪೋಲೋ ಆಟಗಾರ್ತಿ ನಿಗೂಢವಾಗಿ ಸಾವನ್ನಪ್ಪಿದ ಆಘಾತಕಾರಿ ಸುದ್ದಿ ಹೊರಬಿದ್ದಿದೆ. 

ಕೇರಳದ ಮೂಲದ ಫಾತಿಮಾ ನಿದಾ ಶಿಹಾಬುದ್ದೀನ್ ನಿಗೂಢ ರೀತಿಯಲ್ಲಿ ಹಠಾತ್ ಸಾವನ್ನಪ್ಪಿದ್ದು ರಾಷ್ಟ್ರೀಯ ಸೈಕಲ್ ಪೋಲೋ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ನಾಗ್ಪುರಕ್ಕೆ ಬಂದಿದ್ದಳು.

ನಿನ್ನೆ ಇದ್ದಕ್ಕಿದ್ದಂತೆ ಫಾತಿಮಾ ಆರೋಗ್ಯ ಹದಗೆಟ್ಟಿದ್ದು, ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದಳು. ಆಕೆಯನ್ನು ಚಿಕಿತ್ಸೆಗಾಗಿ ನಾಗ್ಪುರದ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಆಕೆಗೆ ಚುಚ್ಚುಮದ್ದು ನೀಡಲಾಗಿತ್ತು. ಚುಚ್ಚುಮದ್ದಿನ ನಂತರ ಫಾತಿಮಾ ಸಾವನ್ನಪ್ಪಿದ್ದಳು.

ಮಗಳು ಅಸ್ವಸ್ಥಗೊಂಡ ಬಗ್ಗೆ ಮಾಹಿತಿ ತಿಳಿದ ಕೂಡಲೇ ಫಾತಿಮಾ ತಂದೆ ಶಿಹಾಬುದ್ದೀನ್ ಕೇರಳ ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ಅಲ್ಲಿ ಸುದ್ದಿ ವಾಹಿನಿಗಳಲ್ಲಿ ತಮ್ಮ ಮಗಳ ಸುದ್ದಿ ಬರುತ್ತಿದ್ದುದ್ದನ್ನು ಕಂಡ ಅವರು ಅಲ್ಲೇ ಕುಸಿದು ಬೀಳುತ್ತಾರೆ. ನಂತರ ಸಮಾಧಾನಗೊಂಡ ಅವರು ಕೇರಳದಿಂದ ನಾಗ್ಪುರಕ್ಕೆ ಆಗಮಿಸಿದ್ದು ಇಂದು ಫಾತಿಮಾ ಅವರ ಮರಣೋತ್ತರ ಪರೀಕ್ಷೆ ನಡೆಯಲಿದೆ.

ಫಾತಿಮಾ ನಿದಾ ಸಾವಿಗೆ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದು, ಫಾತಿಮಾ ಸಾವಿನ ಕುರಿತು ಸಮಗ್ರ ತನಿಖೆ ನಡೆಸುವಂತೆ ಕೆಪಿಸಿಸಿ ಅಧ್ಯಕ್ಷ ಕೆ ಸುಧಾಕರನ್ ಒತ್ತಾಯಿಸಿದ್ದಾರೆ.

ಕೇರಳದ ಆಟಗಾರರನ್ನು ರಾಷ್ಟ್ರೀಯ ಫೆಡರೇಶನ್ ಕಡೆಗಣಿಸಿತು. ಫೆಡರೇಶನ್ ತಂಡಕ್ಕೆ ವಸತಿ ಮತ್ತು ಆಹಾರವನ್ನು ಒದಗಿಸುವುದರಿಂದ ಹಿಂದೆ ಸರಿಯಿತು. ಹೀಗಾಗಿ ಕೇರಳ ಸೈಕಲ್ ಪೋಲೋ ಅಸೋಸಿಯೇಷನ್ ​​ಸ್ವತಃ ತನ್ನ ತಂಡಕ್ಕೆ ವ್ಯವಸ್ಥೆ ಮಾಡಿತು. ಇದಕ್ಕಾಗಿ ಕೇರಳದಲ್ಲಿ ಹಲವರಿಂದ ದೇಣಿಗೆ ಸಂಗ್ರಹಿಸಲಾಯಿತು.

ಆದ್ದರಿಂದ ರಾಜ್ಯ ಸರ್ಕಾರ ಹಾಗೂ ಕ್ರೀಡಾ ಇಲಾಖೆ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಮಕ್ಕಳ ಮೇಲಿನ ಮಾನಸಿಕ ಒತ್ತಡವನ್ನು ಹೋಗಲಾಡಿಸಿ ಮಕ್ಕಳ ಬಗ್ಗೆ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಸುಧಾಕರನ್ ಮನವಿ ಮಾಡಿದ್ದಾರೆ. ಅಲ್ಲದೆ ಫಾತಿಮಾ ಸಾವಿನ ಬಗ್ಗೆ ಆಳವಾದ ತನಿಖೆ ನಡೆಯಬೇಕಿದೆ ಎಂದು ಆಗ್ರಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com