ಜಾವಲಿನ್ ಥ್ರೋ ಡೈಮಂಡ್ ಲೀಗ್: ತನ್ನದೇ ದಾಖಲೆ ಮುರಿದು ಬೆಳ್ಳಿ ಗೆದ್ದ ಭಾರತದ ನೀರಜ್ ಚೋಪ್ರಾ

ಜಾವಲಿನ್ ಥ್ರೋ ಡೈಮಂಡ್ ಲೀಗ್ ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಭಾರತದ ನೀರಜ್ ಚೋಪ್ರಾ ತನ್ನದೇ ದಾಖಲೆ ಮುರಿದಿದ್ದಾರೆ.
ಡೈಮಂಡ್ ಲೀಗ್-ನೀರಜ್ ಚೋಪ್ರಾ
ಡೈಮಂಡ್ ಲೀಗ್-ನೀರಜ್ ಚೋಪ್ರಾ

ಸ್ವೀಡನ್: ಜಾವಲಿನ್ ಥ್ರೋ ಡೈಮಂಡ್ ಲೀಗ್ ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಭಾರತದ ನೀರಜ್ ಚೋಪ್ರಾ ತನ್ನದೇ ದಾಖಲೆ ಮುರಿದಿದ್ದಾರೆ.

ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಗುರುವಾರ ಮತ್ತೊಂದು ಅಮೋಘ ಪ್ರದರ್ಶನ ನೀಡಿ ಸ್ಟಾಕ್‌ಹೋಮ್‌ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ ಕೂಟದಲ್ಲಿ ಬೆಳ್ಳಿ ಪದಕ ಗೆದ್ದು ತಮ್ಮದೇ ಆದ ಹಿಂದಿನ ದಾಖಲೆಯನ್ನು ಮುರಿದರು. 2020 ರ ಒಲಿಂಪಿಕ್ ನಲ್ಲಿ ಭಾರತಕ್ಕೆ ಚಿನ್ನ ತಂದು ಕೊಟ್ಟ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಅವರು  ಜೂನ್ 30 ರಂದು ಸ್ಟಾಕ್‌ಹೋಮ್‌ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ (Diamond League) ನಲ್ಲಿ 89.94 ಮೀ. ಓಪನಿಂಗ್ ಥ್ರೋ ಮೂಲಕ ಹೊಸ ರಾಷ್ಟ್ರೀಯ ದಾಖಲೆ ಮಾಡಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಸ್ಟಾಕ್‌ಹೋಮ್‌ನಲ್ಲಿ ಆಡಿದ ಡೈಮಂಡ್ ಲೀಗ್‌ನಲ್ಲಿ ನೀರಜ್ 89.94 ಮೀಟರ್‌ ದೂರ ಎಸೆದಿದ್ದು, ಆ ಮೂಲಕ ಜೂನ್ 14ರಂದು ತಾವು ನಿರ್ಮಿಸಿದ್ದ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ. 

ಜೂನ್‌ ತಿಂಗಳ ಆರಂಭದಲ್ಲಿ ತುರ್ಕುದಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ನೀರಜ್ 89.30 ಮೀ. ಜಾವೆಲಿನ್‌ ಎಸೆಸುವ ಮೂಲಕ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು. ಈ ಮೂಲಕ ಒಂದು ತಿಂಗಳಲ್ಲಿ ಎರಡು ಬಾರಿ ತನ್ನದೇ ದಾಖಲೆಯನ್ನು ಮುರಿದ್ದಿದ್ದಾರೆ. ಗುರುವಾರ ನಡೆದ ಡೈಮಂಡ್ ಲೀಗ್‌ನಲ್ಲಿ ಗ್ರೆನಡಾದ ಹಾಲಿ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್ ತಮ್ಮ ಮೂರನೇ ಪ್ರಯತ್ನದಲ್ಲಿ 90.31 ಮೀ ಜಾವೆಲಿನ್‌ ಎಸೆಯುವ ಮೂಲಕ  ಚಿನ್ನದ ಪದಕ ಗೆದ್ದುಕೊಂಡರು. ಜೊತೆಗೆ ಡೈಮಂಡ್ ಟ್ರೋಫಿ ಮತ್ತು 40,000 ಸಾವಿರ ಡಾಲರ್ ಪಡೆದರು. ನೀರಜ್ ಚೋಪ್ರಾ ಈ ಲೀಗ್ ನಲ್ಲಿ 90 ಮೀಟರ್ ಎಸೆಯುವ ವಿಶ್ವಾಸ ವ್ಯಕ್ತಪಡಿಸಿದ್ದರು. 89.94 ಮೀ. ಎಸೆಯುವ ಮೂಲಕ ಅವರ ಗುರಿ ತಲುಪಲು 6 ಸೆಂ. ಮೀಟರ್ ಅಷ್ಟೇ ಕಡಿಮೆಯಾಗಿತ್ತು.

24 ವರ್ಷ ವಯಸ್ಸಿನ ನೀರಜ್ ಚೋಪ್ರಾ ಜೂನ್ 14 ರಂದು  ಫಿನ್ಲೆಂಡ್‍ನ ತುರ್ಕುನಲ್ಲಿ ನಡೆದ ಪಾವೊ ನುರ್ಮಿ ಗೇಮ್ಸ್ ನಲ್ಲಿ  89.30 ಮೀಟರ್ ಎಸೆಯುವ ಮೂಲಕ ದಾಖಲೆ ನಿರ್ಮಿಸಿದ್ದರು. ಇದೇ ದಾಖಲೆಯನ್ನು ಜೂನ್ 30 ರಂದು ನಡೆದ ಡೈಮಂಡ್ ಲೀಗ್   89.94 ಮೀ. ಎಸೆಯುವ ಮೂಲಕ ಮುರಿದರು. ಈ ಪಂದ್ಯದಲ್ಲಿ ಜೋಪ್ರಾ ಅವರ ಇತರ ಎಸೆತಗಳು ಕ್ರಮವಾಗಿ  84.37, 87.46, 84.77, 86.67 ಮತ್ತು 86.84 ಇತ್ತು.

ಗ್ರೆನಾಡಾದ ಅಥ್ಲೀಟ್,  ಆಂಡರ್ಸನ್ ಪೀಟರ್ಸ್ ಪ್ರಸಕ್ತ ಸೀಸನ್‍ನ ಅಗ್ರಗಣ್ಯರೆನಿಸಿಕೊಂಡಿದ್ದು 90.31 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ತನ್ನದಾಗಿಸಿಕೊಂಡರು. ಅವರ ಮೂರನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ್ದು, ಪ್ರಸಕ್ತ ಸೀಸನ್‍ನಲ್ಲಿ ಈ ಪಂದ್ಯಕ್ಕೂ ಮುನ್ನ ಎರಡು ಬಾರಿ ಅವರು 90 ಮೀಟರ್‍ಗಿಂತ ಅಧಿಕ ದೂರಕ್ಕೆ ಜಾವೆಲಿನ್ ಎಸೆದಿದ್ದಾರೆ. ಡೈಮಂಡ್ ಲೀಗ್‍ನ ದೋಹಾ ಲೆಗ್‍ನಲ್ಲಿ 93.07 ಮೀಟರ್ ಹಾಗೂ ನೆದರ್ಲೆಂಡ್ಸ್‍ನ ಹೆಂಗೆಲೊದಲ್ಲಿ 90.75 ಮೀಟರ್ ದೂರಕ್ಕೆ ಜಾವೆಲಿನ್ ಎಸೆದಿದ್ದಾರೆ. ಉಳಿದಂತೆ ಜರ್ಮನಿಯ ಜ್ಯೂಲಿಯನ್ ವೆಬೆರ್ 89.08 ಮೀಟರ್ ಎಸೆದು ಕಂಚಿನ ಪದಕ ಪಡೆದರೆ ಟೋಕಿಯೊ ಒಲಿಂಪಿಕ್ ಬೆಳ್ಳಿಪದಕ ವಿಜೇತ ಜಾಕುಬ್ ವದ್ಲೆಜೆಚ್ 88.59 ಮೀಟರ್ ಎಸೆಯುವ ಮೂಲಕ 4ನೇ ಸ್ಥಾನ ಪಡೆದರು. ಚೋಪ್ರಾ ವಿಶ್ವ ಚಾಂಪಿಯನ್‌ಶಿಪ್‌ಗೆ ಮುನ್ನ ಮೂರು ಪಂದ್ಯಗಳನ್ನು ಹೊಂದಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com