ಇಂಡೋನೇಷ್ಯಾ: ಫುಟ್‌ಬಾಲ್ ಪಂದ್ಯದ ವೇಳೆ ಗಲಭೆ; ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 170ಕ್ಕೇರಿಕೆ

ಇಂಡೋನೇಷ್ಯಾದ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆದ ಗಲಭೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 170ಕ್ಕೇರಿದೆ. 
ಫುಟ್‌ಬಾಲ್ ಪಂದ್ಯದ ವೇಳೆ ಗಲಭೆ
ಫುಟ್‌ಬಾಲ್ ಪಂದ್ಯದ ವೇಳೆ ಗಲಭೆ

ಜಕಾರ್ತ: ಇಂಡೋನೇಷ್ಯಾದ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆದ ಗಲಭೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 170ಕ್ಕೇರಿದೆ. 

ಆಕ್ರೋಶಗೊಂಡ ಸಾವಿರಾರು ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಿದ್ದು, ಅವರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಇದರಿಂದ ಕಾಲ್ತುಳಿತ ಉಂಟಾಯಿತು ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಭಾನುವಾರ ಬೆಳಗ್ಗೆ 9:30 ಕ್ಕೆ (0230 GMT) ಸಾವಿನ ಸಂಖ್ಯೆ 158 ಆಗಿತ್ತು. ನಂತರ 10:30 ಕ್ಕೆ ಸಾವಿನ ಸಂಖ್ಯೆ 170ಕ್ಕೆ ಏರಿದೆ. ಇದು ಪೂರ್ವ ಜಾವಾ ವಿಪತ್ತು ತಗ್ಗಿಸುವ ಸಂಸ್ಥೆ ಸಂಗ್ರಹಿಸಿದ ಡೇಟಾ ಎಂದು ಪೂರ್ವ ಜಾವಾ ಡೆಪ್ಯೂಟಿ ಗವರ್ನರ್ ಎಮಿಲ್ ದರ್ಡಾಕ್ ಬ್ರಾಡ್‌ಕಾಸ್ಟರ್ ಕೊಂಪಸ್‌ ಟಿವಿಗೆ ತಿಳಿಸಿದ್ದಾರೆ.

ಶನಿವಾರ ರಾತ್ರಿ ನಡೆದ ಈ ದುರಂತದಲ್ಲಿ 18ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದು ವಿಶ್ವದ ಅತ್ಯಂತ ಮಾರಣಾಂತಿಕ ಕ್ರೀಡಾಂಗಣದ ದುರಂತಗಳಲ್ಲಿ ಒಂದಾಗಿದೆ.

ಇಂಡೋನೇಷ್ಯಾದ ಟಾಪ್ ಲೀಗ್ BRI ಲಿಗಾ 1 ಪಂದ್ಯದಲ್ಲಿ ಪರ್ಸೆಬಯಾ ತಂಡ 3-2 ರಿಂದ ಗೆದ್ದ ನಂತರ ಈ ದುರ್ಘಟನೆ ಸಂಭವಿಸಿದೆ. ಹೀಗಾಗಿ ಇಂಡೋನೇಷ್ಯಾದಲ್ಲಿ ಒಂದು ವಾರಗಳ ಕಾಲ ಆಟಗಳನ್ನು ಸ್ಥಗಿತಗೊಳಿಸಿ ತನಿಖೆ ಪ್ರಾರಂಭಿಸಲಾಗಿದೆ ಎಂದು ಇಂಡೋನೇಷ್ಯಾದ ಫುಟ್ಬಾಲ್ ಅಸೋಸಿಯೇಷನ್ ​​(PSSI) ತಿಳಿಸಿದೆ.

ಅರೆಮಾ ಎಫ್‌ಸಿ ಮತ್ತು ಪರ್ಸೆಬಯಾ ಸುರಬಯಾ ನಡುವಿನ ಪಂದ್ಯ ಮುಗಿದ ನಂತರ, ಸೋತ ತಂಡದ ಬೆಂಬಲಿಗರು ಪಿಚ್‌ಗೆ ನುಗ್ಗಿ ಗಲಾಟೆ ಮಾಡಿದ್ದೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ. ಅಭಿಮಾನಿಗಳು ಪಿಚ್​ಗೆ ಇಳಿಯುತ್ತಿದ್ದಂತೆ ಪೊಲೀಸರು ಅಶ್ರುವಾಯು ಬಳಸಿ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರು. ಆದರೂ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಮತ್ತು ಉಸಿರುಗಟ್ಟುವಿಕೆಯಿಂದ 170 ಜನ ಮೃತಪಟ್ಟಿದ್ದಾರೆ.

ಅಧ್ಯಕ್ಷ ಜೊಕೊ ವಿಡೊಡೊ ದುರಂತದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಎಲ್ಲಾ ಫುಟ್ಬಾಲ್ ಪಂದ್ಯಗಳ ಸುರಕ್ಷತಾ ಪರಿಶೀಲನೆ ಮತ್ತು ಭದ್ರತಾ ಸುಧಾರಣೆಗಳು ಪೂರ್ಣಗೊಳ್ಳುವವರೆಗೆ ಎಲ್ಲಾ ಪಂದ್ಯಗಳನ್ನು ಅಮಾನತುಗೊಳಿಸುವಂತೆ ದೇಶದ ಫುಟ್ಬಾಲ್ ಸಂಸ್ಥೆಗೆ ನಿರ್ದೇಶನ ನೀಡಿದ್ದಾರೆ. ಈ ದುರಂತಕ್ಕೆ ನಾನು ತೀವ್ರವಾಗಿ ವಿಷಾದಿಸುತ್ತೇನೆ ಮತ್ತು ಈ ಫುಟ್ಬಾಲ್ ದುರಂತ ನಮ್ಮ ದೇಶದಲ್ಲಿ ಕೊನೆಯಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ವಿಡೋಡೋ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com