ವಿಶ್ವ ಅಥ್ಲೆಟಿಕ್ಸ್ ನಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನ: 'ಒಲಿಂಪಿಕ್ ವೀರ' ನೀರಜ್ ಚೋಪ್ರಾ ಕೊಂಡಾಡಿದ ಪ್ರಧಾನಿ ಮೋದಿ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್'ನ ಜಾವೆಲಿನ್ ಎಸೆತದಲ್ಲಿ ಬಂಗಾರಕ್ಕೆ ಮುತ್ತಿಟ್ಟ ಒಲಿಂಪಿಕ್ ವೀರ ನೀರಜ್ ಚೋಪ್ರಾ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊಂಡಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್'ನ ಜಾವೆಲಿನ್ ಎಸೆತದಲ್ಲಿ ಬಂಗಾರಕ್ಕೆ ಮುತ್ತಿಟ್ಟ ಒಲಿಂಪಿಕ್ ವೀರ ನೀರಜ್ ಚೋಪ್ರಾ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊಂಡಾಡಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಇದು ಕ್ರೀಡೆಯಲ್ಲಿ ನೀರಜ್ ಚೋಪ್ರಾ ಅವರ ಶ್ರೇಷ್ಠತೆಯನ್ನು ತೋರಿಸುತ್ತದೆ. ಅವರ ಆಟದ ನಿಖರತೆ ಮತ್ತು ಉತ್ಸಾಹವು ಅವರನ್ನು ಅಥ್ಲೆಟಿಕ್ಸ್‌ನಲ್ಲಿ ಕೇವಲ ಚಾಂಪಿಯನ್‌ ಆಗಿರದೆ ಇಡೀ ಕ್ರೀಡಾ ಜಗತ್ತಿನಲ್ಲಿ ಸಾಟಿಯಿಲ್ಲದ ಶ್ರೇಷ್ಠತೆಯ ಸಂಕೇತವಾಗಿ ಬೆಳೆದಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.

ಹಂಗೇರಿಯ ಬುಡಾಪೆಸ್ಟ್ ನಲ್ಲಿ ಭಾನುವಾರ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಫೈನಲ್ ಪಂದ್ಯದಲ್ಲಿ 88.17 ಮೀಟರ್ ದೂರ ಭರ್ಜಿ ಎಸೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ದಾಖಲೆ ನಿರ್ಮಿಸಿದ್ದಾರೆ.

ಮೊದಲ ಸುತ್ತಿನಲ್ಲೇ ಫೌಲ್ ಮಾಡಿದ್ದ ನೀರಜ್, 2ನೇ ಸುತ್ತಿನಲ್ಲಿ 88.17 ಮೀಟರ್ ದೂರಕ್ಕೆ ಎಸೆಯುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ಪಾಕಿಸ್ತಾನದ ಅರ್ಷದ್ ನದೀಮ್ ಅವರು 87.82 ಮೀಟರ್ ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕ ಗೆದ್ದಿದ್ದಾರೆ.

2022ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದರು. ಆದರೆ ಈ ಬಾರಿ ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

1983ರಿಂದಲೂ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಕೂಟದಲ್ಲಿ ಭಾರತಕ್ಕಿದು 3ನೇ ಪದಕ, 2003ರ ಪ್ಯಾರಿಸ್ ವಿಶ್ವ ಕೂಟದಲ್ಲಿ ಮಹಿಳೆಯರ ಲಾಂಗ್ ಜಂಪ್ ನಲ್ಲಿ ಅಂಜು ಬಾಬಿ ಜಾರ್ಜ್ ಮೊದಲ ಪದಕ ತಂದು ಕೊಟ್ಟಿದ್ದರು. ಕಳೆದ ವರ್ಷ ಅಮೆರಿಕಾದಲ್ಲಿ ನಡೆದಿದ್ದ ಕೂಟದಲ್ಲಿ ಪುರುಷರ ಜಾವೆಲಿನ್ ಎಸೆತದಲ್ಲಿ ನೀರಜ್ ಬೆಳ್ಳಿ ಪದಕ ಗೆದ್ದಿದ್ದರು.

ನೀರಜ್ ವಿಶ್ವದ ಎಲ್ಲಾ ಪ್ರಮುಖ ಕೂಟಗಳಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 201/ರಲ್ಲಿ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದಿದ್ದ ಅವರು, ಅದೇ ವರ್ಷ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಾಂಪಿಯನ್ ಎನಿಸಿಕೊಂಡರು, 2021ರಲ್ಲಿ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಬಳಿಕ ಕಳೆದ ವರ್ಷ ಡೈಮಂಡ್ ಲೀಗ್ ಪ್ರಶಸ್ತಿ ತನ್ನದಾಗಿಸಿಕೊಂಡರು. ವಿಶ್ವಕೂಟದಲ್ಲಿ ಬಾಕಿ ಇದ್ದ ಸ್ವರ್ಣವನ್ನು ಈ ಬಾಗಿ ಕೊರಳಿಗೇರಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com