ಚೆಸ್ ವಿಶ್ವಕಪ್‍ನ ರನ್ನರ್ ಅಪ್ ಪ್ರಜ್ಞಾನಂದಗೆ ಭರ್ಜರಿ ಸ್ವಾಗತ: ಕಾರು ಉಡುಗೊರೆ ನೀಡಿದ ಮಹೀಂದ್ರಾ!

ಚೆಸ್ ವಿಶ್ವಕಪ್‍ನ ರನ್ನರ್ ಅಪ್ ಆಗಿರುವ ಆರ್. ಪ್ರಜ್ಞಾನಂದ ಭಾರತಕ್ಕೆ ವಾಪಸ್ ಆಗಿದ್ದು, ಅವರಿಗೆ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ದೊರೆತಿರುವಂತೆಯೇ ಮಹೀಂದ್ರಾ ಸಂಸ್ಥೆಯಿಂದಲೂ ವಿಶೇಷ ಉಡುಗೊರೆ ದೊರೆತಿದೆ.
ಪ್ರಜ್ಞಾನಂದ
ಪ್ರಜ್ಞಾನಂದ

ನವದೆಹಲಿ: ಚೆಸ್ ವಿಶ್ವಕಪ್‍ನ ರನ್ನರ್ ಅಪ್ ಆಗಿರುವ ಆರ್. ಪ್ರಜ್ಞಾನಂದ ಭಾರತಕ್ಕೆ ವಾಪಸ್ ಆಗಿದ್ದು, ಅವರಿಗೆ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ದೊರೆತಿರುವಂತೆಯೇ ಮಹೀಂದ್ರಾ ಸಂಸ್ಥೆಯಿಂದಲೂ ವಿಶೇಷ ಉಡುಗೊರೆ ದೊರೆತಿದೆ.

ಜರ್ಮನಿಯಿಂದ ಸ್ವದೇಶಕ್ಕೆ ಮರಳಿದ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಅವರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ವಿಮಾನ ನಿಲ್ದಾಣದಲ್ಲಿ ಪ್ರಜ್ಞಾನಂದ ಅವರಿಗೆ ಹೂಗುಚ್ಛ ನೀಡಿ ಬರಮಾಡಿಕೊಳ್ಳಲಾಯಿತು. ಪ್ರಜ್ಞಾನಂದ ದೇಶಕ್ಕೆ ಹಿಂದಿರುಗುತ್ತಿದ್ದಂತೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಭವ್ಯವಾದ ಸ್ವಾಗತ ಕೋರಲಾಯಿತು. ಈ ವೇಳೆ, ವಿಮಾನ ನಿಲ್ದಾಣದಲ್ಲಿ ಡೊಳ್ಳು, ಬಾಜಾ-ಭಜಂತ್ರಿ ಮುಂತಾದ ವಾದ್ಯ, ಮೊಳಗಿದವು. ಅಷ್ಟೇ ಅಲ್ಲ ಪ್ರಜ್ಞಾನಂದ ಅವರನ್ನು ಬರಮಾಡಿಕೊಳ್ಳಲು ಸಹಪಾಠಿಗಳು, ಅಖಿಲ ಭಾರತ ಚೆಸ್ ಫೆಡರೇಷನ್ ಪ್ರತಿನಿಧಿಗಳು ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಮಾನ ನಿಲ್ದಾಣದಲ್ಲಿ ಇಷ್ಟೊಂದು ಜನರನ್ನು ನೋಡಿ ನನಗೆ ತುಂಬಾನೇ ಸಂತೋಷವಾಗಿದೆ. ಇದು ನಿಜವಾಗಿಯೂ ಅದ್ಭುತ ಕ್ಷಣವಾಗಿದೆ. ಇದು ಚೆಸ್‌ಗೆ ಒಳ್ಳೆಯದು ಎಂದು ನಾನು ಭಾವಿಸುತ್ತೇನೆ ಎಂದು ಭಾರತೀಯ ಚೆಸ್ ಗ್ರ್ಯಾಂಡ್‌ಮಾಸ್ಟರ್ ಮತ್ತು 2023 ರ FIDE ವಿಶ್ವಕಪ್ ರನ್ನರ್-ಅಪ್ ಪ್ರಜ್ಞಾನಂದ ಅವರು ಹೇಳಿದರು.

ವಿಶೇಷ ಕಾರು ಉಡುಗೊರೆ ನೀಡಿದ ಮಹೀಂದ್ರಾ
ಇನ್ನು ಚೆಸ್ ವಿಶ್ವಕಪ್‍ನ ರನ್ನರ್ ಅಪ್ ಆಗಿರುವ ಆರ್. ಪ್ರಜ್ಞಾನಂದ ಮಹೀಂದ್ರಾ ಸಂಸ್ಥೆ ವಿಶೇಷ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದು, ಎಲೆಕ್ಟ್ರಿಕ್ ಕಾರನ್ನು ಪ್ರಜ್ಞಾನಂದ ಪೋಷಕರಿಗೆ ನೀಡಿದೆ. ಈ ಕುರಿತು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಪ್ರಜ್ಞಾನಂದ, 'ಇದು ನನ್ನ ಹೆತ್ತವರ ಬಹಳ ವರ್ಷಗಳ ಕನಸಾಗಿತ್ತು. ಇದೀಗ ಈ ಬಹುದೊಡ್ಡ ಕನಸು ನನಸಾಗಿಸಿದ್ದಕ್ಕೆ ಧನ್ಯವಾದಗಳು ಸರ್ ಎಂದು ಆನಂದ್ ಮಹೀಂದ್ರಾ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಪ್ರಜ್ಞಾನಂದಗೆ ಥಾರ್ ನೀಡುವಂತೆ ಒತ್ತಾಯಿಸಿದ್ದ ಕ್ರೀಡಾ ಪ್ರೇಮಿಗಳು
ಇನ್ನು ಪ್ರಜ್ಞಾನಂದ ಚೆಸ್ ವಿಶ್ವಕಪ್ ನಲ್ಲಿ ರನ್ನರ್ ಅಪ್ ಆಗುತ್ತಿದ್ದಂತೆಯೇ ಹಲವಾರು ಮಂದಿ ಟ್ವೀಟ್ ಮಾಡಿ, ಥಾರ್ ಗಿಫ್ಟ್ ಮಾಡುವಂತೆ ಆನಂದ್ ಮಹೀಂದ್ರಾ ಅವರನ್ನು ಒತ್ತಾಯಿಸಿದ್ದರು. ಈ ಟ್ವೀಟ್‍ಗೆ ಪ್ರತಿಕ್ರಿಯಿಸಿದ್ದ ಆನಂದ್ ಮಹೀಂದ್ರಾ, ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ. ಆದರೆ ನನ್ನಲ್ಲಿ ಮತ್ತೊಂದು ಐಡಿಯಾ ಇದೆ. ಅದೇನೆಂದರೆ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರ ಪೋಷಕರನ್ನು ಪ್ರೋತ್ಸಾಹಿಸಲು ಬಯಸುತ್ತೇನೆ. ಹೀಗಾಗಿ ನಾನು ಪ್ರಜ್ಞಾನಂದ ಪೋಷಕರಿಗೆ XUV4OO EV ಎಲೆಕ್ಟ್ರಿಕ್ ವಾಹನವನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದ್ದರು. 

ಚೆಸ್ ವಿಶ್ವಕಪ್‍ನಲ್ಲಿ ಪ್ರಜ್ಞಾನಂದ ಸಾಧನೆ
ಅಝರ್ ಬೈಜಾನ್ ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್ ನ (Chess World Cup 2023) ಫೈನಲ್ ಟೈ ಬ್ರೇಕರ್ ಸುತ್ತಿನಲ್ಲಿ 5 ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಮ್ಯಾಗ್ನಸ್ ಕಾರ್ಲ್‍ಸೆನ್ (Magnus Carlsen) ಗೆಲುವು ಸಾಧಿಸಿ 6ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ್ದರು. ಭಾರತೀಯ ಯುವ ಚೆಸ್ ಪಟು ಪ್ರಜ್ಞಾನಂದಗೆ (Praggnanandhaa) ಸೋಲಾಗಿ ಅವರು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com