ಹೈದರಬಾದ್ : ದೇಶದ ಪ್ರಖ್ಯಾತ ಕ್ರೀಡಾ ತಾರೆಗಳನ್ನು ತನ್ನ ಐಕಾನ್‌ಗಳನ್ನಾಗಿ ಇರಿಸಿಕೊಳ್ಳುವ ಸಂಪ್ರದಾಯವನ್ನು ಆರ್‌ಸಿಬಿ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲೂ ಮುಂದುವರಿಸಿದೆ.
ಮುಂಬರುವ ಮಹಿಳಾ ಕ್ರಿಕೆಟ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳೆಯರ ತಂಡದ ಸಲಹೆಗಾರರಾಗಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ನೇಮಕ ಮಾಡಲಾಗಿದೆ.
'ಭಾರತದ ಮುಂಚೂಣಿ ಕ್ರೀಡಾಪಟು, ಯೂತ್ ಐಕಾನ್, ವೃತ್ತಿಜೀವನದುದ್ದಕ್ಕೂ ಧೈರ್ಯಶಾಲಿ ಮತ್ತು ಎಲ್ಲ ಅಡೆತಡೆಗಳನ್ನು ಮೀರಿ ಆಡಿದ ಆಟಗಾರ್ತಿ, ಮೈದಾನದ ಒಳಗೂ ಹೊರಗೂ ಚಾಂಪಿಯನ್ ಸಾನಿಯಾ ಮಿರ್ಜಾ, ಅವರನ್ನು ಆರ್‌ಸಿಬಿ ಮಹಿಳಾ ಕ್ರಿಕೆಟ್ ತಂಡದ ಸಲಹೆಗಾರರಾಗಿ ಸ್ವಾಗತಿಸಲು ನಾವು ಹೆಮ್ಮೆಪಡುತ್ತೇವೆ’ಎಂದು ಆರ್‌ಸಿಬಿ ಟ್ವಿಟರ್ ಪುಟದಲ್ಲಿ ಬರೆಯಲಾಗಿದೆ.
ಆರ್‌ಸಿಬಿ ತಂಡಕ್ಕೆ ಮೆಂಟರ್ ಆಗುವಂತೆ ಕೇಳಿದಾಗ ನನಗೆ ಅಚ್ಚರಿಯೊಂದಿಗೆ ಸಂಭ್ರಮ ಕೂಡ ಆಗಿತು. ಅದೃಷ್ಟವೋ ಅಥವಾ ದುರಾದೃಷ್ಟವೋ ತಿಳಿಯದು. ಕಳೆದ 20 ವರ್ಷಗಳಿಂದ ನಾನು ವೃತ್ತಿಪರ ಅಥ್ಲೀಟ್ ಆಗಿದ್ದೇನೆ.
ಈಗ ನನ್ನ ಮುಂದಿನ ಕೆಲಸವೇನೆಂದರೆ, ಯುವ ಮಹಿಳೆಯರು ಹಾಗೂ ಬಾಲಕಿಯರಿಗೆ ಕ್ರೀಡೆಯನ್ನು ವೃತ್ತಿಯನ್ನಾಗಿ ತೆಗೆದುಕೊಳ್ಳುವಂತೆ ಪ್ರಯತ್ನಿಸುವುದು ಹಾಗೂ ಸಹಾಯ ಮಾಡುವುದು. ಅವರಿಗೆ ಕ್ರೀಡೆಯನ್ನೇ ಮೊದಲ ಆಯ್ಕೆಯನ್ನಾಗಿ ಮಾಡಿಕೊಳ್ಳುವಂತೆ ಪ್ರೋತ್ಸಾಹ ನೀಡುವ ಜವಾಬ್ದಾರಿ ನನ್ನದು ಎಂದು ಆರ್‌ಸಿಬಿಯ ಮೆಂಟರ್ ಆಗಿ ನೇಮಕವಾದ ಬಳಿಕ ನಡೆದ ಮಾತುಕತೆಯ ವೇಳೆ ತಿಳಿಸಿದ್ದಾರೆ.
ಆರು ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ವಿಜೇತೆಯಾಗಿರುವ ಸಾನಿಯಾ ಮಿರ್ಜಾ, ಕ್ಲಬ್‌ನ ಪ್ಲೇ ಬೋಲ್ಡ್ ಸಂಪ್ರದಾಯಕ್ಕೆ ಸೂಕ್ತವಾಗಿ ಒಗ್ಗಿಕೊಳ್ಳುತ್ತಾರೆ ಎಂದು ಕ್ಲಬ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ' ಭಾರತದಲ್ಲಿ ಮಹಿಳಾ ವಿಭಾಗದ ಕ್ರೀಡೆಗಳ ಶ್ರೇಷ್ಠ ತಾರೆ, ಯುವ ಐಕಾನ್, ತನ್ನ ವೃತ್ತಿಜೀವನದುದ್ದಕ್ಕೂ ಧೈರ್ಯದ ನಿರ್ಧಾರದ ಮೂಲಕ ಗಮನಸೆಳೆದವರು.
Advertisement