ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಬೇಡಿಕೆ ಈಡೇರಿಸುವುದಾಗಿ ಸರ್ಕಾರ ಭರವಸೆ; ಕುಸ್ತಿಪಟುಗಳ ಹೋರಾಟ ಅಂತ್ಯ

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‍ಐ) ಅಧ್ಯಕ್ಷ ಬೃಜ್‍ಭೂಷಣ್ ಶರಣ್ ಸಿಂಗ್ ತಮ್ಮ ರಾಜೀನಾಮೆ ನೀಡುವುದೂ ಸೇರಿದಂತೆ ಕುಸ್ತಿಪಟುಗಳ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕುಸ್ತಿಪಟುಗಳು ಎರಡು ದಿನಗಳಿಂದ ನಡೆಸುತ್ತಿದ್ದ ಧರಣಿ ಶುಕ್ರವಾರ ರಾತ್ರಿ ಅಂತ್ಯಗೊಂಡಿದೆ.
ಕುಸ್ತಿಪಟುಗಳ ಪ್ರತಿಭಟನೆ
ಕುಸ್ತಿಪಟುಗಳ ಪ್ರತಿಭಟನೆ

ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‍ಐ) ಅಧ್ಯಕ್ಷ ಬೃಜ್‍ಭೂಷಣ್ ಶರಣ್ ಸಿಂಗ್ ತಮ್ಮ ರಾಜೀನಾಮೆ ನೀಡುವುದೂ ಸೇರಿದಂತೆ ಕುಸ್ತಿಪಟುಗಳ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕುಸ್ತಿಪಟುಗಳು ಎರಡು ದಿನಗಳಿಂದ ನಡೆಸುತ್ತಿದ್ದ ಧರಣಿ ಶುಕ್ರವಾರ ರಾತ್ರಿ ಅಂತ್ಯಗೊಂಡಿದೆ.

ಕುಸ್ತಿ ಫೆಡರೇಶನ್‌ನ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ಸರ್ಕಾರ ಹೋರಾಟಗಾರರಿಗೆ ಭರವಸೆ ನೀಡಿದೆ.

ವಿನೇಶ್ ಫೋಗಟ್, ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ರವಿ ದಹಿಯಾ ಸೇರಿದಂತೆ ಹಲವು ಕುಸ್ತಿಪಟುಗಳು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರೊಂದಿಗೆ ಶುಕ್ರವಾರ ರಾತ್ರಿ ಎರಡನೇ ಸುತ್ತಿನ ಮಾತುಕತೆಯ ನಡೆಸಿದರು. ಮಾತುಕತೆ ವೇಳೆ ಸರ್ಕಾರ ಹೋರಾಟಗಾರರ ದೂರುಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದೆ. ಅದೇ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಕೊನೆಗೊಳಿಸಲು ಹೋರಾಟಗಾರರು ನಿರ್ಧರಿಸಿದರು. ದೂರುಗಳ ತನಿಖೆಗೆ ಮೇಲುಸ್ತುವಾರಿ ಸಮಿತಿ ರಚಿಸಲಾಗುವುದು. ಆರೋಪಗಳ ತನಿಖೆ ಮಾಡುವವರೆಗೆ ಡಬ್ಲ್ಯುಎಫ್‌ಐ ಮುಖ್ಯಸ್ಥರು ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಮೇಲುಸ್ತುವಾರಿ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿ ಸದಸ್ಯರ ಹೆಸರುಗಳನ್ನು ನಾಳೆ ಪ್ರಕಟಿಸಲಾಗುತ್ತದೆ. ಸಮಿತಿ ನಾಲ್ಕು ವಾರಗಳಲ್ಲಿ ತನಿಖೆ ಪೂರ್ಣಗೊಳಿಸಲಿದೆ. ಇದು ಹಣಕಾಸು ಅವ್ಯವಹಾರ ಮತ್ತು ಲೈಂಗಿಕ ಕಿರುಕುಳ ಸೇರಿದಂತೆ ಎಲ್ಲ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಲಿದೆ" ಎಂದು ಅನುರಾಗ್ ಠಾಕೂರ್ ಮ್ಯಾರಥಾನ್ ಸಭೆ ಬಳಿಕ ವಿವರಿಸಿದರು.

ತನಿಖೆ ಪೂರ್ಣಗೊಳ್ಳುವವರಗೆ ಸಿಂಗ್ ಅವರು ಹುದ್ದೆಯಿಂದ ಹೊರಗಿದ್ದು, ತನಿಖೆಗೆ ಸಹಕರಿಸಲಿದ್ದಾರೆ. ಮೇಲುಸ್ತುವಾರಿ ಸಮಿತಿ ಡಬ್ಲ್ಯುಎಫ್‍ಐನ ದೈನಂದಿನ ವ್ಯವಹಾರಗಳನ್ನು ನಿರ್ವಹಿಸಲಿದೆ ಎಂದು ಸ್ಪಷ್ಟಪಡಿಸಿದರು.

ಪ್ರತಿಭಟನಾಕಾರರ ಪರವಾಗಿ ಮಾತನಾಡಿದ ಬಜರಂಗ್ ಪೂನಿಯಾ, ಸಭೆಯ ಫಲಿತಾಂಶದಿಂದ ನಮಗೆ ತೃಪ್ತಿ ಇದೆ, ತನಿಖಾ ಸಮಿತಿಯಲ್ಲಿ ನಮಗೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದರು. ನಮ್ಮ ಕುಸ್ತಿಪಟುಗಳು ಡಬ್ಲ್ಯುಎಫ್‌ಐನಿಂದ ಬೆದರಿಕೆಗಳ ಬಗ್ಗೆ ಸ್ವಲ್ಪ ಚಿಂತಿತರಾಗಿದ್ದರು, ಆದರೆ ಸಚಿವಾಲಯವು ನಮಗೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಭರವಸೆ ನೀಡಿದೆ, ಹೀಗಾಗಿ ಪ್ರತಿಭಟನೆಯನ್ನು ಹಿಂಪಡೆಯಲಾಗುವುದು ಎಂದು ಹೇಳಿದರು. ಸಂಜೆ 6 ಗಂಟೆ ಸುಮಾರಿಗೆ ಆರಂಭವಾದ ಸಭೆಯಲ್ಲಿ ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ವಿಜೇತರಾದ ವಿನೇಶ್ ಫೋಗಟ್ ಮತ್ತು ಅಂಶು ಮಲಿಕ್ ಸೇರಿದ್ದರು.

ಇದಕ್ಕೂ ಮುನ್ನ ಬ್ರಿಜ್ ಭೂಷಣ್ ಶರಣ್ ಸಿಂಗ್ ರಾಜೀನಾಮೆ ನೀಡಲು ನಿರಾಕರಿಸಿದ್ದರು. ಶನಿವಾರದಂದು ಸೀನಿಯರ್ ನ್ಯಾಷನಲ್ ಸೀನಿಯರ್ ಓಪನ್ ನ್ಯಾಷನಲ್ ರ್ಯಾಂಕಿಂಗ್ ಟೂರ್ನಮೆಂಟ್ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಗೋಂಡಾದಲ್ಲಿ ಅವರು ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com