WFI ಚುನಾವಣೆ: ಚುನಾವಣಾಧಿಕಾರಿಯಾಗಿ ಜಸ್ಟೀಸ್ ಮಿತ್ತಲ್ ಆಯ್ಕೆ! ಚುನಾವಣೆ ನಡೆಯುವುದು ಹೇಗೆ?

ಕೊನೆಗೂ ಭಾರತದ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಗೆ ಮುಂದಿನ ತಿಂಗಳು ಚುನಾವಣೆ ನಡೆಯಲಿದ್ದು, ಹೊಸ ಮುಖ್ಯಸ್ಥರು ನೇಮಕವಾಗುವ ಸಾಧ್ಯತೆಯಿದೆ. ಅದಕ್ಕೆ ಮೊದಲ ಹೆಜ್ಜೆಯಾಗಿ ಚುನಾವಣಾಧಿಕಾರಿ ನೇಮಕ ಮಾಡಲಾಗಿದೆ. 
ಭಾರತದ ಕುಸ್ತಿ ಫೆಡರೇಷನ್ ಲೋಗೊ
ಭಾರತದ ಕುಸ್ತಿ ಫೆಡರೇಷನ್ ಲೋಗೊ

ಚೆನ್ನೈ: ಕೊನೆಗೂ ಭಾರತದ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಗೆ ಮುಂದಿನ ತಿಂಗಳು ಚುನಾವಣೆ ನಡೆಯಲಿದ್ದು, ಹೊಸ ಮುಖ್ಯಸ್ಥರು ನೇಮಕವಾಗುವ ಸಾಧ್ಯತೆಯಿದೆ. ಅದಕ್ಕೆ ಮೊದಲ ಹೆಜ್ಜೆಯಾಗಿ ಚುನಾವಣಾಧಿಕಾರಿ ನೇಮಕ ಮಾಡಲಾಗಿದೆ. 

ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಮಹೇಶ್ ಮಿತ್ತಲ್ ಕುಮಾರ್ ಅವರನ್ನು ಚುನಾವಣಾಧಿಕಾರಿಯಾಗಿ ಭಾರತೀಯ ಒಲಿಂಪಿಕ್ ಅಸೋಸಿಯೇನ್ ಸೋಮವಾರ ನೇಮಿಸಿದೆ. ಜುಲೈ 4 ರೊಳಗೆ ಚುನಾವಣೆ ನಡೆಸಬೇಕೆಂದು ಐಒಎ ಬಯಸಿದೆ ಆದರೆ, ಆದರೆ ನ್ಯಾಯಮೂರ್ತಿ ಮಿತ್ತಲ್ ವಿಶೇಷ ಸಾಮಾನ್ಯ ಸಭೆಯನ್ನು ಯಾವಾಗ ಕರೆಯಬಹುದು, ಏಲ್ಲಿ ಚುನಾವಣೆ ನಡೆಸಬಹುದು ಎಂಬುದನ್ನು ನಿರ್ಧರಿಸಬಹುದು.

WFI ಸಂವಿಧಾನದ ಪ್ರಕಾರ, ವಾರ್ಷಿಕ ಸಾಮಾನ್ಯ ಸಭೆ ಅಥವಾ ವಿಶೇಷ ಸಾಮಾನ್ಯ ಸಭೆಯಲ್ಲಿ ಚುನಾವಣೆ  ನಡೆಸಬಹುದು. ವಿಶೇಷ ಸಾಮಾನ್ಯ ಸಭೆ ಕರೆಯಲು ಸ್ಪಷ್ಟವಾದ 21-ದಿನದ ಸೂಚನೆಯ ಅಗತ್ಯವಿದೆ. ಮಂಗಳವಾರವೇ ಈ ಕುರಿತು ಸೂಚನೆ ನೀಡಿದರೆ ಜುಲೈ 4ರಂದು  ಚುನಾವಣೆ ನಡೆಸಬಹುದು. ಆದರೆ ಇದು ಇನ್ನೊಂದಿಷ್ಟ ದಿನ ಮುಂದೂಡುವ ಸಾಧ್ಯತೆಯಿದೆ. 

IOA ಜಂಟಿ ಕಾರ್ಯದರ್ಶಿ ಮತ್ತು ಕಾರ್ಯ ನಿರ್ವಾಹಕ ಅಧಿಕಾರಿ ಕಲ್ಯಾಣ್ ಚೌಬೆ ಸೋಮವಾರ ಅಧಿಕೃತ ಪತ್ರದ ಮೂಲಕ ನ್ಯಾಯಮೂರ್ತಿ ಮಿತ್ತಲ್ ಅವರ ನೇಮಕಾತಿಯನ್ನು ದೃಢಪಡಿಸಿದ್ದಾರೆ, ಚುನಾವಣೆಗಳನ್ನು ನಡೆಸಲು ಸಹಾಯಕ ಚುನಾವಣಾಧಿಕಾರಿ ಮತ್ತು ಇತರ ಸಿಬ್ಬಂದಿ ನೇಮಿಸಲು ಅವರಿಗೆ ಅಧಿಕಾರ ನೀಡಿದ್ದಾರೆ.

ಬಾಕಿಯಿರುವ ಡಬ್ಲ್ಯುಎಫ್‌ಐನ ಚುನಾವಣೆಯನ್ನು ಮುಂದಿನ ಮೂರು ವಾರಗಳಲ್ಲಿ ನಡೆಸಲಾಗುವುದು ಮತ್ತು ಚುನಾವಣಾ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಚುನಾವಣಾಧಿಕಾರಿ ಹೊರಡಿಸುವ ನಿರೀಕ್ಷೆಯಿದೆ ಎಂದು ಚೌಬೆ ತಿಳಿಸಿದ್ದಾರೆ. ಪ್ರಸ್ತುತ, ಚಂಡೀಗಢ ಮತ್ತು ದೆಹಲಿಯ ಕೇಂದ್ರಾಡಳಿತ ಪ್ರದೇಶ ಒಳಗೊಂಡಂತೆ ಡಬ್ಲ್ಯೂಎಫ್ ಐ 25  ರಾಜ್ಯ ಘಟಕಗಳನ್ನು ಹೊಂದಿದೆ. ಒಬ್ಬ ಸದಸ್ಯರು ಚುನಾವಣೆಯಲ್ಲಿ ಮತ ಚಲಾಯಿಸಲು ಇಬ್ಬರು ಪ್ರತಿನಿಧಿಗಳನ್ನು ಕಳುಹಿಸಬಹುದು, ಒಟ್ಟಾರೇ 50 ಮತಗಳಿರುತ್ತವೆ. 

ಆದಾಗ್ಯೂ, ಕೆಲವು ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಸಂಘಗಳು ಅಸ್ತಿತ್ವದಲ್ಲಿವೆ. ಅಲ್ಲದೆ ಡಬ್ಲ್ಯೂಎಫ್ ಐ ವೆಬ್‌ಸೈಟ್‌ ಪ್ರಕಾರ ಮಹಾರಾಷ್ಟ್ರ, ಮಣಿಪುರ ಮತ್ತು ಉತ್ತರಾಖಂಡ ಘಟಕಗಳು, ಆಯಾ ರಾಜ್ಯಗಳ ಸಂಸ್ಥೆಗಳು ಮತ್ತು ಸೊಸೈಟಿಗಳ ನೋಂದಣಿಯಿಂದ ನೀಡಲಾದ ನೋಂದಣಿ ಪ್ರಮಾಣಪತ್ರಗಳನ್ನು ಹೊಂದಿಲ್ಲ. 2019ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 26 ಘಟಕಗಳು ಮತ ಚಲಾಯಿಸಿವೆ. ಆದರೆ, ಗೋವಾ ಈ ಬಾರಿ ಸಂಯೋಜಿತ ಘಟಕಗಳ ಪಟ್ಟಿಯಿಂದ ಕಾಣೆಯಾಗಿದೆ.

ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಜೂನ್ 7 ರಂದು ಪ್ರತಿಭಟನಾ ನಿರತ ಕುಸ್ತಿಪಟುಗಳೊಂದಿಗಿನ ಸಭೆಯ ನಂತರ, ಜೂನ್ 30 ರೊಳಗೆ ಡಬ್ಲ್ಯುಎಫ್‌ಐ ಚುನಾವಣೆಗಳನ್ನು ನಡೆಸಲಾಗುವುದು ಎಂದು ಹೇಳಿದ್ದರು. ಅಲ್ಲದೇ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಗೂ ಅವರ  ಕುಟುಂಬ ಸದಸ್ಯರು, ಸಹವರ್ತಿಗಳಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಎಂದು ಠಾಕೂರ್  ಕುಸ್ತಿಪಟುಗಳಿಗೆ ಭರವಸೆ ನೀಡಿದ್ದರು.  ನಂತರ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ಜೂನ್ 15 ರವರೆಗೆ ಸ್ಥಗಿತಗೊಳಿಸಿದ್ದಾರೆ. ಬ್ರಿಜ್ ಭೂಷಣ್ ವಿರುದ್ಧದ ಆರೋಪ ಪಟ್ಟಿಯನ್ನು ಜೂನ್ 15 ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಕ್ರೀಡಾ ಸಚಿವರು ಹೇಳಿದರು.

ಡಬ್ಲ್ಯೂಎಫ್ ಐ ಅಧ್ಯಕ್ಷ ಸ್ಥಾನಕ್ಕೆ ಹರಿಯಾಣದ ಬಿಜೆಪಿ ಅಧ್ಯಕ್ಷನನ್ನು ಆಯ್ಕೆ ಮಾಡಿದ ಕುಸ್ತಿಪಟುಗಳು?

ಪ್ರತಿಭಟನಾ ನಿರತ ಕುಸ್ತಿಪಟುಗಳು ಹರಿಯಾಣದ ಮಾಜಿ ಕ್ಯಾಬಿನೆಟ್ ಸಚಿವ ಮತ್ತು ರಾಜ್ಯದ ಹಾಲಿ ಬಿಜೆಪಿ ಅಧ್ಯಕ್ಷ ಓಂ ಪ್ರಕಾಶ್ ಧನಕರ್ ಅವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳು  ತಿಳಿಸಿವೆ. ಅದೇ ರೀತಿ ರೈಲ್ವೇ ಕ್ರೀಡೆ ಉತ್ತೇಜನ ಬೋರ್ಡ್ (ಆರ್‌ಎಸ್‌ಪಿಬಿ) ಮಾಜಿ ಕಾರ್ಯದರ್ಶಿ ಎನ್.ಆರ್.ಚೌಧರಿ ಕಾರ್ಯದರ್ಶಿ ಹುದ್ದೆಗೆ,  ಜಿಯಾನ್ ಸಿಂಗ್ ಖಜಾಂಚಿ ಸ್ಥಾನಕ್ಕೆ ಹೆಸರುಗಳನ್ನು ಕುಸ್ತಿಪಟುಗಳು ಗೃಹ ಸಚಿವರು ಮತ್ತು ಕ್ರೀಡಾ ಸಚಿವರಿಗೆ ಸೂಚಿಸಿದ್ದಾರೆ. ಆದರೆ ಜೂನ್ 15 ರಂದು ಏನು ನಡೆಯಲಿದೆ  ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com