ಕರ್ತವ್ಯಕ್ಕೆ ಮರಳಿದ ಬಜರಂಗ್ ಪೂನಿಯಾ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್: ಪ್ರತಿಭಟನೆ ಕೈಬಿಟ್ಟಿಲ್ಲ ಎಂದ ಸಾಕ್ಷಿ!
ಕುಸ್ತಿ ಅಸೋಸಿಯೇಷನ್ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಅವರು ತಮ್ಮ ಕರ್ತವ್ಯಕ್ಕೆ ಮರಳಿದ್ದಾರೆ.
Published: 05th June 2023 03:05 PM | Last Updated: 05th June 2023 03:05 PM | A+A A-

ಕುಸ್ತಿಪಟುಗಳು
ಕುಸ್ತಿ ಅಸೋಸಿಯೇಷನ್ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಅವರು ತಮ್ಮ ಕರ್ತವ್ಯಕ್ಕೆ ಮರಳಿದ್ದಾರೆ.
ಆದರೆ, ಕುಸ್ತಿಪಟುಗಳು ಚಳವಳಿಯಿಂದ ಹಿಂದೆ ಸರಿಯುತ್ತಿರುವ ಸುದ್ದಿಯನ್ನು ಸಾಕ್ಷಿ ಮಲಿಕ್ ಅಲ್ಲಗಳೆದಿದ್ದು ಸತ್ಯಾಗ್ರಹದ ಜೊತೆಗೆ ರೈಲ್ವೆಯಲ್ಲಿ ನನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ ಎಂದು ಸಾಕ್ಷಿ ಮಲಿಕ್ ಹೇಳಿದರು.
ವಾಸ್ತವವಾಗಿ, ಸಾಕ್ಷಿ ಮಲಿಕ್ ಕುಸ್ತಿಪಟುಗಳ ಚಳವಳಿಯಿಂದ ಹಿಂದೆ ಸರಿದಿದ್ದಾರೆ ಎಂಬ ವರದಿಗಳಿವೆ. ಆದರೆ, ಈ ವರದಿಗಳನ್ನು ಸಾಕ್ಷಿ ಮಲಿಕ್ ನಿರಾಕರಿಸಿದ್ದಾರೆ. ನ್ಯಾಯಕ್ಕಾಗಿ ನಡೆಯುವ ಹೋರಾಟದಲ್ಲಿ ನಾವೇನೂ ಹಿಂದೆ ಸರಿದಿಲ್ಲ, ಸರಿಯುವುದಿಲ್ಲ ಎಂದರು. ನಮಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ. ಈ ಹಿಂದೆ ಸಾಕ್ಷಿ ಮಲಿಕ್ ಅವರ ಪತಿ ಸತ್ಯವ್ರತ್ ಕಡಿಯಾನ್ ಕೂಡ ಚಳವಳಿಯಿಂದ ಹಿಂದೆ ಸರಿಯುವ ಸುದ್ದಿಯನ್ನು ನಿರಾಕರಿಸಿದ್ದರು.
ವಾಸ್ತವವಾಗಿ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ನೇತೃತ್ವದಲ್ಲಿ, ಎಲ್ಲಾ ಕುಸ್ತಿಪಟುಗಳು ಕುಸ್ತಿ ಅಸೋಸಿಯೇಷನ್ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದರು. ಈ ಕುಸ್ತಿಪಟುಗಳು ಏಪ್ರಿಲ್ 23 ರಿಂದ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಇದಕ್ಕೂ ಮೊದಲು ಜನವರಿಯಲ್ಲಿ ಕುಸ್ತಿಪಟುಗಳು ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಧರಣಿ ನಡೆಸಿದ್ದರು. ಆದರೆ, ಕ್ರೀಡಾ ಸಚಿವಾಲಯದ ಮಧ್ಯಪ್ರವೇಶದ ನಂತರ ಕುಸ್ತಿಪಟುಗಳು ಧರಣಿ ಕೈಬಿಟ್ಟಿದ್ದರು.
ಇದನ್ನೂ ಓದಿ: 1 ಗಂಟೆಗೂ ಅಧಿಕ ಸಮಯ ಕುಸ್ತಿಪಟುಗಳೊಂದಿಗೆ ನಡೆದ ಸಭೆಯಲ್ಲಿ ಅಮಿತ್ ಶಾ ಹೇಳಿದ್ದೇನೆಂದರೆ...
7 ಮಹಿಳಾ ಕುಸ್ತಿಪಟುಗಳು ಏಪ್ರಿಲ್ 21ರಂದು ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಬ್ರಿಜ್ ಭೂಷಣ್ ವಿರುದ್ಧ ದೂರು ದಾಖಲಿಸಿದ್ದರು. ಈ ದೂರುಗಳ ಆಧಾರದ ಮೇಲೆ, ಏಪ್ರಿಲ್ 28ರಂದು ದೆಹಲಿ ಪೊಲೀಸರು ಬ್ರಿಜ್ ಭೂಷಣ್ ವಿರುದ್ಧ ಎರಡು ಲೈಂಗಿಕ ಕಿರುಕುಳ ಪ್ರಕರಣಗಳನ್ನು ದಾಖಲಿಸಿದ್ದಾರೆ. ಮೊದಲ ಎಫ್‌ಐಆರ್ ಅಪ್ರಾಪ್ತರು ಮಾಡಿದ ಆರೋಪಗಳನ್ನು ಆಧರಿಸಿದೆ. ಈ ಕುರಿತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆದರೆ, ಎರಡನೇ ಎಫ್‌ಐಆರ್ ಇತರ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪಗಳಿಗೆ ಸಂಬಂಧಿಸಿದೆ. ಈ ಪ್ರಕರಣಗಳಲ್ಲಿ ಪೊಲೀಸ್ ತನಿಖೆ ನಡೆಯುತ್ತಿದೆ.
ಕೇಂದ್ರ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿದ್ದ ಕುಸ್ತಿಪಟುಗಳು
ಇದಕ್ಕೂ ಮುನ್ನ ಶನಿವಾರವೇ ಕುಸ್ತಿಪಟುಗಳು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಕುಸ್ತಿಪಟು ಸಾಕ್ಷಿ ಮಲಿಕ್ ಅವರ ಪತಿ ಸತ್ಯವ್ರತ್ ಕಡಿಯಾನ್ ಅವರು ಆಜ್ ತಕ್ ಜೊತೆಗಿನ ಸಂಭಾಷಣೆಯಲ್ಲಿ ಭೇಟಿಯನ್ನು ಖಚಿತಪಡಿಸಿದ್ದಾರೆ. ಈ ಸಭೆಯಲ್ಲಿ ಅವರೂ ಉಪಸ್ಥಿತರಿದ್ದರು. ಆದರೆ, ಸಭೆಯಲ್ಲಿ ಕುಸ್ತಿಪಟುಗಳು ಬ್ರಿಜ್ ಭೂಷಣ್ ಅವರನ್ನು ಬಂಧಿಸುವಂತೆ ಒತ್ತಾಯಿಸಿದರು ಎಂದು ಅವರು ಹೇಳಿದ್ದರು. ಆದರೆ ಈ ಸಭೆ ಅನಿರ್ದಿಷ್ಟವಾಗಿಯೇ ಉಳಿಯಿತು. ಗೃಹ ಸಚಿವರಿಂದ ನಮಗೆ ಬೇಕಾದ ಪ್ರತಿಕ್ರಿಯೆ ಸಿಗದ ಕಾರಣ ಸಭೆಯಿಂದ ಹೊರ ಬಂದೆವು ಎಂದು ಹೇಳಿದರು. ಪ್ರತಿಭಟನೆಗೆ ಮತ್ತಷ್ಟು ತಂತ್ರ ರೂಪಿಸುತ್ತಿದ್ದೇವೆ ಎಂದು ಸತ್ಯವ್ರತ್ ಹೇಳಿದ್ದಾರೆ. ನಾವು ಹಿಂದೆ ಸರಿಯುವುದಿಲ್ಲ, ನಾವು ಮುಂದಿನ ಕ್ರಮವನ್ನು ಯೋಜಿಸುತ್ತಿದ್ದೇವೆ ಎಂದರು.