ಹ್ಯಾಂಗ್ ಝೌ: ಚೀನಾದ ಹ್ಯಾಂಗ್ ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಹಾಕಿ ಪಂದ್ಯಾವಳಿಯಲ್ಲಿ ಸಿಂಗಾಪುರ ತಂಡದ ವಿರುದ್ಧ ಭಾರತ ತಂಡ ಭರ್ಜರಿ 16–1 ಅಂತರದ ಗೋಲುಗಳ ಜಯಭೇರಿ ಭಾರಿಸಿದೆ.
ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಮಂದೀಪ್ ಸಿಂಗ್ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಸಿಂಗಪುರ ವಿರುದ್ಧದ ಹಾಕಿ ಪಂದ್ಯದಲ್ಲಿ ಭಾರತ ತಂಡ 16–1 ಗೋಲುಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿದೆ. ಈ ಪಂದ್ಯಾವಳಿಯಲ್ಲಿ ಭಾರತಕ್ಕೆ ಇದು ಎರಡನೇ ಸತತ ಗೆಲುವಾಗಿದೆ. ಉಜ್ಬೇಕಿಸ್ತಾನ ವಿರುದ್ಧದ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ 16–0 ಅಂತರದ ಜಯ ಸಾಧಿಸಿದ್ದ ಭಾರತ ತಂಡ ಗೆಲುವಿನ ಓಟ ಮುಂದುವರಿಸಿದೆ.
2 ಪಂದ್ಯಗಳಲ್ಲಿ 32 ಗೋಲು
ಇನ್ನು ಕಳೆದ ಪಂದ್ಯದಂತೆಯೇ ಈ ಪಂದ್ಯದಲ್ಲೂ ಭಾರತ ತಂಡ 16 ಗೋಲು ಗಳಿಸಿದ್ದು, ಆ ಮೂಲಕ ಕೇವಲ 2 ಪಂದ್ಯಗಳಿಂದ ಬರೊಬ್ಬರಿ 32 ಗೋಲುಗಳನ್ನು ಭಾರಿಸಿದೆ. ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಮಂದೀಪ್ ಸಿಂಗ್ ಅವರ ಹ್ಯಾಟ್ರಿಕ್ ಗೋಲುಗಳು ಭಾರತ ತಂಡಕ್ಕೆ ಭಾರಿ ಮುನ್ನಡೆ ತಂದುಕೊಟ್ಟಿತು.
ಹರ್ಮನ್‌ಪ್ರೀತ್ (24, 39, 40, 42ನೇ ನಿಮಿಷ) ಮತ್ತು ಮಂದೀಪ್ (12, 30, 51ನೇ ನಿಮಿಷ), ಅಭಿಷೇಕ್ (51, 52ನೇ ನಿಮಿಷ), ವರುಣ್ ಕುಮಾರ್ (55, 55ನೇ ನಿಮಿಷ), ಲಲಿತ್ ಕುಮಾರ್ ಉಪಾಧ್ಯಾಯ (16ನೇ ನಿಮಿಷ), ಗುರ್ಜಂತ್ ಸಿಂಗ್ (22ನೇ ನಿಮಿಷ), ವಿವೇಕ್ ಸಾಗರ್ ಪ್ರಸಾದ್(23ನೇ ನಿಮಿಷ), ಮನ್ ಪ್ರೀತ್ ಸಿಂಗ್ (37ನೇ ನಿಮಿಷ), ಶಂಶೇರ್ ಸಿಂಗ್ (38ನೇ ನಿಮಿಷ) ಗೋಲು ಗಳಿಸಿದರು.
ಈ ಪಂದ್ಯದ ಗೆಲುವಿನ ಮೂಲಕ ಪೂಲ್ ಎ ಗುಂಪಿನಲ್ಲಿ ಭಾರತ ಅಗ್ರಸ್ಥಾನಿಯಾಗಿ ಉಳಿದಿದ್ದು, ಭಾರತವು ಗುರುವಾರ ಹಾಲಿ ಚಾಂಪಿಯನ್ ಜಪಾನ್ ಅನ್ನು ಎದುರಿಸಲಿದೆ.
Advertisement