ಪ್ಯಾರಿಸ್: ಭಾರತ ಹಾಕಿ ತಂಡದ ಪ್ರಮುಖ ಡಿಫೆಂಡರ್ ಅಮಿತ್ ರೋಹಿದಾಸ್ ಅವರು ಜರ್ಮನಿ ವಿರುದ್ಧ ಮಂಗಳವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಆಡಲು ಸಾಧ್ಯವಿಲ್ಲ. ಏಕೆಂದರೆ ಅವರ ಮೇಲೆ ವಿಧಿಸಲಾದ ಒಂದು ಪಂದ್ಯದ ಅಮಾನತು ವಿರುದ್ಧ ಹಾಕಿ ಇಂಡಿಯಾ ಸಲ್ಲಿಸಿದ ಮೇಲ್ಮನವಿಯನ್ನು ಅಂತರರಾಷ್ಟ್ರೀಯ ಹಾಕಿ ಫೆಡರೇಶನ್ (FIH) ತಿರಸ್ಕರಿಸಿದೆ.
ಭಾನುವಾರ ಗ್ರೇಟ್ ಬ್ರಿಟನ್ ವಿರುದ್ಧ ನಡೆದ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ರೋಹಿದಾಸ್ ರೆಡ್ ಕಾರ್ಡ್ ಪಡೆದಿದ್ದರು. ಈ ಕಾರಣದಿಂದಾಗಿ ಎಫ್‌ಐಎಚ್ ಅವರನ್ನು ಒಂದು ಪಂದ್ಯಕ್ಕೆ ಅಮಾನತುಗೊಳಿಸಿತ್ತು. ಅಂದರೆ ಈ ಮಹತ್ವದ ಪಂದ್ಯಕ್ಕೆ ಕೇವಲ 15 ಭಾರತೀಯ ಆಟಗಾರರು ಮಾತ್ರ ಲಭ್ಯವಾಗಲಿದ್ದು, ಎಂಟು ಬಾರಿಯ ಒಲಿಂಪಿಕ್ ಚಾಂಪಿಯನ್ ಪಟ್ಟಕ್ಕೇರಿದವರಿಗೆ ಭಾರೀ ಹೊಡೆತ ಬಿದ್ದಿದೆ.
ಆಗಸ್ಟ್ 4ರಂದು ಭಾರತ ಮತ್ತು ಗ್ರೇಟ್ ಬ್ರಿಟನ್ ನಡುವೆ ನಡೆದ ಪಂದ್ಯದ ವೇಳೆ ಎಫ್‌ಐಎಚ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಅಮಿತ್ ರೋಹಿದಾಸ್ ಅವರನ್ನು ಒಂದು ಪಂದ್ಯಕ್ಕೆ ಅಮಾನತುಗೊಳಿಸಲಾಗಿದೆ ಎಂದು ಅಂತರರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್‌ಐಹೆಚ್) ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ರೋಹಿದಾಸ್ ಅವರ ಅಮಾನತು ವಿರುದ್ಧ ಹಾಕಿ ಇಂಡಿಯಾ ಮೇಲ್ಮನವಿ ಸಲ್ಲಿಸಿತ್ತು. ಆದರೆ ಅದನ್ನು ಎಫ್‌ಐಎಚ್ ತೀರ್ಪುಗಾರರ ಪೀಠ ತಿರಸ್ಕರಿಸಿತು. ಸೂಕ್ತ ಶ್ರದ್ಧೆ ಮತ್ತು ಚರ್ಚೆಯ ನಂತರ, ಹಾಕಿ ಇಂಡಿಯಾದ ಮನವಿಯನ್ನು ತಿರಸ್ಕರಿಸಲಾಗಿದೆ. ಅಮಿತ್ ಸೆಮಿಫೈನಲ್‌ನಲ್ಲಿ ಆಡುವುದಿಲ್ಲ ಎಂದು ಎಫ್‌ಐಹೆಚ್ ಹೇಳಿದೆ.
ಗ್ರೇಟ್ ಬ್ರಿಟನ್ ವಿರುದ್ಧ ಭಾನುವಾರದ ಪಂದ್ಯದಲ್ಲಿ ಅಂತಿಮ 40 ನಿಮಿಷಗಳ ಹೋರಾಟಕ್ಕೂ ಮೊದಲು ರೋಹಿದಾಸ್ ಅವರ ಹಾಕಿ ಸ್ಟಿಕ್ ಅಜಾಗರೂಕತೆಯಿಂದ ಎದುರಾಳಿ ಆಟಗಾರನಿಗೆ ಬಡಿದ ನಂತರ ಮೈದಾನದಿಂದ ಹೊರಗೆ ಕಳುಹಿಸಲಾಯಿತು. ಗ್ರೇಟ್ ಬ್ರಿಟನ್ ವಿರುದ್ಧದ ಪಂದ್ಯದ ಎರಡನೇ ಕ್ವಾರ್ಟರ್‌ನಲ್ಲಿ 31 ವರ್ಷದ ರೋಹಿದಾಸ್ ಮೈದಾನದಲ್ಲಿ ವಿಲ್ ಕ್ಯಾಲನನ್ ಅವರೊಂದಿಗೆ ವಾಗ್ವಾದಕ್ಕಿಳಿದರು. ಆನ್-ಫೀಲ್ಡ್ ಅಂಪೈರ್ ಮೊದಲು ಭಾರತೀಯ ಆಟಗಾರನಿಗೆ ಎಚ್ಚರಿಕೆ ನೀಡಿದರು. ಆದರೆ ಟಿವಿ ಅಂಪೈರ್ ವೀಡಿಯೊ ರೆಫರಲ್ ನಂತರ ರೋಹಿದಾಸ್‌ಗೆ ರೆಡ್ ಕಾರ್ಡ್ ನೀಡಿದರು.
ಪಂದ್ಯ ಟೈ ಆಗಿದ್ದು ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತ 4-2 ಅಂತರದಲ್ಲಿ ಗೆದ್ದು ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ನಾಳೆ ವಿಶ್ವ ಚಾಂಪಿಯನ್ ಜರ್ಮನಿ ವಿರುದ್ಧ ಭಾರತ ಸೆಣೆಸಲಿದೆ.
Advertisement