
ಪ್ಯಾರಿಸ್: ರೊಮೇನಿಯಾದ ಜಿಮ್ನಾಸ್ಟ್‌ಗೆ ಕಂಚಿನ ಪದಕ ಮಿಸ್ ಆದ ಹಿನ್ನಲೆಯಲ್ಲಿ ಕೊನೆ ಕ್ಷಣದಲ್ಲಿ ನಡೆದ ಹೈಡ್ರಾಮಾವೇ ಕಾರಣ ಎಂದು ಆರೋಪಿಸಿ ಒಲಿಂಪಿಕ್ಸ್ ಕ್ರೀಡಾಕೂಟ ಸಮಾರೋಪ ಬಹಿಷ್ಕರಿಸುವುದಾಗಿ ರೊಮೇನಿಯಾ ಪ್ರಧಾನಿ ಮಾರ್ಸೆಲ್ ಸಿಯೊಲಾಕು ಘೋಷಿಸಿದ್ದಾರೆ.
ಒಲಿಂಪಿಕ್ಸ್ ಕ್ರೀಡಾಕೂಟದ ಜಿಮ್ನಾಸ್ಟ್ ಕ್ರೀಡೆಯಲ್ಲಿ 3ನೇ ಸ್ಥಾನದಲ್ಲಿದ್ದ ರೊಮೇನಿಯಾ ಸ್ಪರ್ಧಿ ಬಾರ್ಬೋಸು ಅಮೆರಿಕದ ಸ್ಪರ್ಧಿಗಳು ಮತ್ತು ಅಧಿಕಾರಿಗಳು ಪುನರ್ ಪರಿಶೀಲನೆಗೆ ಮನವಿ ಸಲ್ಲಿಸಿದ ಬಳಿಕ 4ನೇ ಸ್ಥಾನಕ್ಕೆ ಕುಸಿದಿದ್ದರು. ಇದು ರೊಮೇನಿಯಾ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಹಿಂದಿನ ದಿನ ರೊಮೇನಿಯಾ ಸ್ಪರ್ಧಿ ಅನಾ ಬಾರ್ಬೋಸು ಕಂಚಿನ ಪದಕ ಖಚಿತ ಎಂದು ಸಂಭ್ರಮಿಸಿದ್ದರು. ಆದರೆ ಅಮೆರಿಕ ತಂಡ ಪುನರ್ ಪರಿಶೀಲನೆಗೆ ಮನವಿ ಮಾಡಿದಾಗ ಅಮೆರಿಕ 3ನೇ ಸ್ಥಾನಕ್ಕೆ ಜಿಗಿದು ರೊಮೇನಿಯಾ 4ನೇ ಸ್ಥಾನಕ್ಕೆ ಕುಸಿದಿತ್ತು. ಇದು ರೊಮೆನಿಯಾಗೆ ಕಂಚಿನ ಪದಕ ಮಿಸ್ ಆಗುವಂತೆ ಮಾಡಿತ್ತು. ಪುನರ್ ಪರೀಶೀಲನೆ ಬಳಿಕ ಅಮೆರಿಕದ ಸ್ಪರ್ಧಿ ಚಿಲಿಸ್ 0.1 ಹೆಚ್ಚುವರಿ ಅಂಕ ಲಭಿಸಿತ್ತು. ಇದು ಅವರನ್ನು ಮೂರನೇ ಸ್ಥಾನಕ್ಕೇರಿಸಿತು ಎನ್ನಲಾಗಿದೆ.
ರೊಮೇನಿಯಾ ಪ್ರಧಾನಿ ಆಕ್ರೋಶ
ಇನ್ನು ಜಿಮ್ನಾಸ್ಟ್ ನಲ್ಲಿ ಕಂಚಿನ ಪದಕ ತಮ್ಮದೇ ಎಂದು ಸಂಭ್ರಮಿಸಿದ್ದ ರೊಮೇನಿಯಾ ಅಭಿಮಾನಿಗಳು ರೆಫರಿಗಳ ನಿರ್ಧಾರದಿಂದ ತೀವ್ರ ಆಕ್ರೋಶಗೊಂಡಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರೊಮೇನಿಯಾ ಪ್ರಧಾನಿ ''ಜಿಮ್ನಾಸ್ಟಿಕ್ಸ್‌ನಲ್ಲಿನ ಹಗರಣ ಸ್ವೀಕಾರಾರ್ಹವಲ್ಲ. ಅಲ್ಲಿ ನಮ್ಮ ಕ್ರೀಡಾಪಟುಗಳನ್ನು ಸಂಪೂರ್ಣವಾಗಿ ಅವಮಾನಕರ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆ.
ಪ್ರಾಮಾಣಿಕ ಕೆಲಸಕ್ಕಾಗಿ ಗಳಿಸಿದ ಪದಕವನ್ನು ಹಿಂಪಡೆದಿರುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಾವು ಒಲಿಂಪಿಕ್ಸ್‌ನ ಸಮಾರೋಪ ಸಮಾರಂಭದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೇವೆ ಎಂದು ರೊಮೇನಿಯಾ ಪ್ರಧಾನಿ ಸಿಯೊಲಾಕು ಘೋಷಣೆ ಮಾಡಿದ್ದಾರೆ.
ಅಂತೆಯೇ "ನಿಮ್ಮ ಕೆಲಸ ಮತ್ತು ಕಣ್ಣೀರು ಯಾವುದೇ ಪದಕಕ್ಕಿಂತ ಹೆಚ್ಚು ಅಮೂಲ್ಯವಾದದ್ದು. ಇಡೀ ರಾಷ್ಟ್ರ ನಿಮ್ಮೊಂದಿಗಿದೆ ಎಂದು ರೊಮೇನಿಯನ್ ಸ್ಪರ್ಧಿಗೆ ಧೈರ್ಯ ತುಂಬಿದ್ದಾರೆ.
ಇನ್ನು ಜಿಮ್ನಾಸ್ಟ್ ಫಲಿತಾಂಶ ಘೋಷಣೆ ವೇಳೆ ರೊಮೇನಿಯನ್ ಧ್ವಜವನ್ನು ಹಿಡಿದುಕೊಂಡು ಸಂಭ್ರಮದಿಂದ ವೇದಿಕೆ ಮೇಲೆ ನಿಂತಿದ್ದ ಬಾರ್ಬೋಸು, ಸ್ಕೋರ್ ಬೋರ್ಡ್ ಪರಿಷ್ಕರಣೆ ಬಳಿಕ ಆಘಾತಕ್ಕೊಳಗಾದರು. ತಾವು 4ನೇ ಸ್ಥಾನಕ್ಕೆ ಕುಸಿದಿರುವುದನ್ನು ನೋಡಿ ಕಣ್ಣೀರು ಹಾಕುತ್ತಲೇ ಧ್ವಜವನ್ನು ಕೆಳಗಿಳಿಸಿದ್ದರು. ಈ ವಿಡಿಯೋ ವೈರಲ್ ಆಗಿತ್ತು.
Advertisement