ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ವಿನೇಶ್ ಫೋಗಟ್ ಅನರ್ಹತೆ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಅಧಿಕಾರಿಗಳು ''ಕೂದಲಿಗೆ ಕತ್ತರಿ ಸೇರಿದಂತೆ ತೂಕ ಇಳಿಕೆಗೆ ಎಲ್ಲ ರೀತಿಯ ಕಠಿಣ ಕ್ರಮ ತೆಗೆದುಕೊಂಡಿದ್ದೆವು'' ಎಂದು ಹೇಳಿದ್ದಾರೆ.
ವಿನೇಶ್ ಫೋಗಟ್ ಮಂಗಳವಾರ ಬರೊಬ್ಬರಿ ಮೂರು ಪಂದ್ಯಗಳನ್ನಾಡಿ ಫೈನಲ್ ಗೇರಿದ್ದರು. ಫೈನಲ್ ನಲ್ಲಿ ಅವರು ಅಮೆರಿಕದ ಸಾರಾ ಹಿಲ್ಡೆಬ್ರಾಂಡ್ ಅವರನ್ನು ಎದುರಿಸಲು ಸಿದ್ಧರಾಗಿದ್ದರು. ಆದರೆ ತೂಕದ ವಿಚಾರವಾಗಿ ಅನರ್ಹಗೊಂಡು ಚಿನ್ನದ ಪದಕದ ಆಸೆ ಕೈ ಬಿಡುವಂತಾಗಿದೆ.
100ಗ್ರಾಂ ತೂಕ ಹೆಚ್ಚಾದ ಕಾರಣ ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿ ಫೈನಲ್ ನಿಂದ ವಿನೇಶ್ ಫೋಗಟ್ ಅನರ್ಹಗೊಂಡಿದ್ದು ಈ ವಿಚಾರವಾಗಿ ಇಂದು ವಿಡಿಯೋ ಹೇಳಿಕೆಯಲ್ಲಿ ಮಾತನಾಡಿದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಮುಖ್ಯ ವೈದ್ಯಾಧಿಕಾರಿ ಡಾ.ದಿನ್ಶಾ ಪರ್ದಿವಾಲಾ ಅವರು ''ವಿನೇಶ್ ಫೋಗಟ್ ಅವರ ತೂಕ ಇಳಿಕೆಗೆ ತೆಗೆದುಕೊಳ್ಳಬೇಕಾದ ಎಲ್ಲ ಕಠಿಣ ಕ್ರಮಗಳನ್ನು ಕೈಗೊಂಡಿದ್ದೆವು ಎಂದು ಹೇಳಿದ್ದಾರೆ.
ವಿನೇಶ್ ಫೋಗಟ್ ಕೂದಲನ್ನು ಕತ್ತರಿಸುವುದು ಆಕೆಯ 50 ಕೆಜಿ ಕುಸ್ತಿ ಫೈನಲ್ ನಲ್ಲಿ ಚಿನ್ನದ ಪದಕಕ್ಕಾಗಿ ನಿಗದಿತ ತೂಕದ ಮಿತಿಯೊಳಗೆ ಇರಲು ಸಹಾಯ ಮಾಡಲು ತೆಗೆದುಕೊಂಡ “ಕಠಿಣ ಕ್ರಮಗಳಲ್ಲಿ” ಒಂದಾಗಿದೆ ಎಂದು ಬುಧವಾರ ಪರ್ದಿವಾಲಾ ಬಹಿರಂಗಪಡಿಸಿದ್ದಾರೆ. ಆದಾಗ್ಯೂ, ಬೆಳಗಿನ ತೂಕ ಪರೀಕ್ಷೆಯ ಸಮಯದಲ್ಲಿ ಆಕೆ 100 ಗ್ರಾಂ ಅಧಿಕ ತೂಕವನ್ನು ಹೊಂದಿದ್ದರಿಂದ ಅನರ್ಹತೆಗೊಳಿಸಲಾಗಿದೆ. ಅನರ್ಹತೆ ತಡೆಯಲು ನಾವು ಕೈಗೊಂಡ ಎಲ್ಲ ಕ್ರಮಗಳು ವಿಫಲವಾದವು.
ಇಡೀ ರಾತ್ರಿ ವಿನೇಶ್ ಫೋಗಟ್ ದೇಹದ ತೂಕ ಇಳಿಕೆಗೆ ವರ್ಕೌಟ್ ಮಾಡಿದ್ದರು. ಅಲ್ಲದೆ ನೀರು ಕೂಡ ಕುಡಿದಿರಲಿಲ್ಲ. ಮುಂಜಾನೆ ದೇಹದ ನಿರ್ಜಲೀಕರಣವನ್ನು ತಡೆಗಟ್ಟಲು ಸ್ವಲ್ಪ ಪ್ರಮಾಣದ ನೀರನ್ನು ನೀಡಬೇಕಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ.
ತೂಕ ಇಳಿಕೆಗೆ ಕೂದಲಿಗೆ ಕತ್ತರಿ ಹಾಕಿ, ರಕ್ತ ಹೊರತೆಗೆಯಲಾಯಿತು: PT ಉಷಾ
ಇದೇ ವಿಚಾರವಾಗಿ ವಿಡಿಯೋದಲ್ಲಿ ಮಾತನಾಡಿದ ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್ನ ಅಧ್ಯಕ್ಷೆ ಪಿ.ಟಿ ಉಷಾ, ''ಕುಸ್ತಿಯಲ್ಲಿ, ಪಂದ್ಯಗಳ ಮೊದಲು ಕುಸ್ತಿಪಟುಗಳನ್ನು ತೂಕ ಪರೀಕ್ಷೆಗೊಳಪಡಿಸಲಾಗುತ್ತದೆ. ಇದಲ್ಲದೇ 2 ದಿನಗಳ ಕಾಲ ಇದೇ ವಿಭಾಗದಲ್ಲಿ ಕುಸ್ತಿಪಟು ತನ್ನ ತೂಕವನ್ನು ಕಾಯ್ದುಕೊಳ್ಳಬೇಕಾಗಿರುತ್ತದೆ. ಆದರೆ ಇದು ವಿನೇಶ್ಗೆ ಸಾಧ್ಯವಾಗಲಿಲ್ಲ. ತೂಕ ಇಳಿಸುವ ಸಲುವಾಗಿ ವಿನೇಶ್ ತನ್ನ ತಲೆ ಕೂದಲು ಮತ್ತು ಉಗುರುಗಳನ್ನು ಸಹ ಕತ್ತರಿಸಿದ್ದಾರೆ.
ಅಂತೆಯೇ ದೇಹದ ರಕ್ತವನ್ನು ಸಹ ಹೊರತೆಗೆಸಿದ್ದಾರೆ. ಇದರಿಂದಾಗಿ ಅವರು ಕೇವಲ 1 ರಾತ್ರಿಯಲ್ಲಿ 1 ಕೆಜಿ. 850 ಗ್ರಾಂ ತೂಕವನ್ನು ಕಡಿಮೆ ಮಾಡಿದ್ದಾರೆ. ಈ ತೂಕವನ್ನು ಕಡಿಮೆ ಮಾಡಲು ವಿನೇಶ್ ಇಡೀ ರಾತ್ರಿ ನಿದ್ರೆ ಮಾಡದೆ ಶ್ರಮಿಸಿದ್ದಾರೆ. ಸೆಮಿ-ಫೈನಲ್ ಪಂದ್ಯವನ್ನು ಗೆದ್ದಾಗ ವಿನೇಶ್ ಅವರ ತೂಕ 52 ಕೆಜಿ ಇತ್ತು. ನಂತರ ತನ್ನ ತೂಕವನ್ನು 2 ಕೆಜಿಯಷ್ಟು ಕಡಿಮೆ ಮಾಡಲು ವಿನೇಶ್ ಇಡೀ ರಾತ್ರಿ ದೇಹ ದಂಡಿಸಿದ್ದಾರೆ. ಆದರೆ ಇದರಿಂದ ಏನೂ ಪ್ರಯೋಜನ ಆಗಿಲ್ಲ. ಆದರೆ ನಿಗದಿತ ತೂಕಕ್ಕಿಂತ ಕೇವಲ 150 ಗ್ರಾಂ ಹೆಚ್ಚಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಕಡಿಮೆ ತೂಕದ ಸ್ಪರ್ಧಿಗಳ ವಿರುದ್ಧ ಸೆಣಸಿದರೆ ಪ್ರಯೋಜನೆ ಹೆಚ್ಚು: ಡಾ ಪಾರ್ದಿವಾಲಾ
ಬಳಿಕ ಮಾತನಾಡಿದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಮುಖ್ಯ ವೈದ್ಯಾಧಿಕಾರಿ ಡಾ.ದಿನ್ಶಾ ಪರ್ದಿವಾಲಾ, "ಕುಸ್ತಿಪಟುಗಳು ಸಾಮಾನ್ಯವಾಗಿ ತಮ್ಮ ನೈಸರ್ಗಿಕ ತೂಕಕ್ಕಿಂತ ಕಡಿಮೆ ತೂಕದ ವಿಭಾಗದಲ್ಲಿ ಭಾಗವಹಿಸುತ್ತಾರೆ. ಅವರು ಕಡಿಮೆ ಪ್ರಬಲ ಎದುರಾಳಿಗಳೊಂದಿಗೆ ಹೋರಾಡುವುದರಿಂದ ಇದು ಅವರಿಗೆ ಪ್ರಯೋಜನವನ್ನು ನೀಡುತ್ತದೆ. ತೂಕ ಕಡಿತದ ಪ್ರಕ್ರಿಯೆಯು ಆಹಾರ ಮತ್ತು ನೀರಿನ ಲೆಕ್ಕಾಚಾರದ ನಿರ್ಬಂಧವನ್ನು ಒಳಗೊಂಡಿರುತ್ತದೆ.
ಜೊತೆಗೆ ವ್ಯಾಯಾಮ ಮತ್ತು ಇತರೆ ಕಠಿಣ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ. ಈ ತೂಕ ಕಡಿತ ಪ್ರಕ್ರಿಯೆಯು ದೌರ್ಬಲ್ಯ ಮತ್ತು ಶಕ್ತಿಯ ಕ್ಷೀಣತೆಗೆ ಕಾರಣವಾಗುತ್ತದೆ. ದೇಹದ ಶಕ್ತಿ ಕುಂದಿ ಸ್ಪರ್ಧಿಗಳು ಅನಾರೋಗ್ಯಕ್ಕೀಡಾಗುತ್ತಾರೆ. ದೇಹದ ನಿರ್ಜಲೀಕರಣವೂ ಇದಕ್ಕೆ ಕಾರಣವಾಗುತ್ತದೆ. ತೂಕ ಪರೀಕ್ಷೆ ಬಳಿಕ ಸ್ಪರ್ಧಿಗಳಿಗೆ ನೀರು ಮತ್ತು ಸೀಮಿತ ಆಹಾರ ನೀಡಲಾಗುತ್ತದೆ. ಇದರಿಂದ ಕೆಲವೊಮ್ಮೆ ತೂಕ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
Advertisement