
ನವದೆಹಲಿ: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 100ಗ್ರಾಂ ತೂಕ ಹೆಚ್ಚಾದ ಹಿನ್ನಲೆಯಲ್ಲಿ ಅನರ್ಹಗೊಂಡಿದ್ದ ಭಾರತದ ಕುಸ್ತಿ ಪಟು ವಿನೇಶ್ ಫೋಗಟ್ ಪರವಾಗಿ ಖ್ಯಾತ ವಕೀಲ ಹರೀಶ್ ಸಾಳ್ವೆ ವಕಾಲತ್ತು ವಹಿಸಲಿದ್ದಾರೆ ಎಂದು ಹೇಳಲಾಗಿದೆ.
ಕ್ರೀಡಾ ಮಂಡಳಿಯಲ್ಲಿ ಭಾರತದ ಅಥ್ಲೀಟ್ ವಿನೇಶ್ ಫೋಗಟ್ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ವಕಾಲತ್ತು ವಹಿಸಲಿದ್ದು ಅವರಿಗೆ ಮತ್ತೋರ್ವ ಖ್ಯಾತ ವಕೀಲ Vidushpat Singhania ಸಾಥ್ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹತೆಗೊಳಿಸಿದ ಒಲಿಂಪಿಕ್ಸ್ ಸಮಿತಿ ನಿರ್ಧಾರ ಪ್ರಶ್ನಿಸಿ ವಿನೇಶ್ ಫೋಗಟ್ ಅವರು ಕ್ರೀಡಾ ಮಂಡಳಿಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ವೇಳೆ ವಕೀಲ ಹರೀಶ್ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯಾ ವಿನೇಶ್ ಫೋಗಟ್ ಪರ ವಾದ ಮಂಡಿಸಲಿದ್ದಾರೆ.
ಮೂಲಗಳ ಪ್ರಕಾರ ಈಗಾಗಲೇ ಫೋಗಟ್ ಪರ ವಾದ ಮಂಡಿಸಲು ಹರೀಶ್ ಸಾಳ್ವೆ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಗುರುವಾರ ರಾತ್ರಿ ಭಾರತೀಯ ಕಾಲಮಾನ 9.30ರ ಒಳಗಾಗಿ ವಕೀಲರನ್ನು ನೇಮಕ ಮಾಡಬೇಕು ಎಂದು ಕ್ರೀಡಾ ಸಮಿತಿ ಸೂಚಿಸಿತ್ತು.
ಶುಕ್ರವಾರ ಪ್ಯಾರಿಸ್ ಸಮಯ ಬೆಳಿಗ್ಗೆ 10 ಗಂಟೆಗೆ (ಭಾರತೀಯ ಕಾಲಮಾನ ಮಧ್ಯಾಹ್ನ 1.30) ವಿಚಾರಣೆ ನಡೆಯಲಿದ್ದು, ಹರೀಶ್ ಸಾಳ್ವೆ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗಿಯಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸಾಳ್ವೆ ಅಲ್ಲದೆ, ಫೋಗಟ್ ಪರ ಇತರ ನಾಲ್ಕು ವಕೀಲರು ಪ್ಯಾರಿಸ್‌ನಲ್ಲಿ ಇರಲಿದ್ದಾರೆ.
ಮಹಿಳೆಯರ 50 ಕೆ.ಜಿ ಕುಸ್ತಿಯಲ್ಲಿ ಸ್ಪರ್ಧಿಸಿದ್ದ ಫೋಗಟ್, ಫೈನಲ್ ಪಂದ್ಯದ ವೇಳೆ ಕೇವಲ 100 ಗ್ರಾಂ ತೂಕ ಹೆಚ್ಚು ಇದ್ದಕ್ಕೆ ಅನರ್ಹಗೊಂಡಿದ್ದರು. ಫೈನಲ್‌ವರೆಗೂ ನಿಯಮಬದ್ಧ ತೂಕವೇ ಇತ್ತು ಹೀಗಾಗಿ ಬೆಳ್ಳಿ ಪದಕಕ್ಕೆ ಪರಿಗಣಿಸಬೇಕು ಎಂದು ವಿನೇಶ್ ಕ್ರೀಡಾ ಮಂಡಳಿಯಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
Advertisement