ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮಹಿಳೆಯರ ಫ್ರೀಸ್ಟೈಲ್ ಕುಸ್ತಿಯ 50 ಕೆ. ಜಿ ವಿಭಾಗದ ಫೈನಲ್ ಪಂದ್ಯದಿಂದ ಅನರ್ಹಗೊಂಡ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಅರ್ಹ ಬೆಳ್ಳಿ ಪದಕ ನೀಡಬೇಕು ಎಂದು ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೊಲ್ಕರ್ ಒತ್ತಾಯಿಸಿದ್ದಾರೆ.
ಫೈನಲ್ ಸುತ್ತಿನಲ್ಲಿ ದೇಹದ ತೂಕ 100 ಗ್ರಾಂ ಹೆಚ್ಚಾಗಿದೆ ಎಂಬ ಕಾರಣ ನೀಡಿ ತಮ್ಮನ್ನು ಅನರ್ಹಗೊಳಿಸಿದ ನಂತರ ನಿವೃತ್ತಿ ಘೋಷಿಸಿರುವ ವಿನೇಶ್ ಫೋಗಟ್, ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್(ಯುಡಬ್ಲ್ಯೂಡಬ್ಲ್ಯು)ನ ವಿವಾದಾತ್ಮಕ ನಿರ್ಧಾರ ಪ್ರಶ್ನಿಸಿ ವಿನೇಶ್ ಫೋಗಟ್ ಅವರು ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್(ಸಿಎಎಸ್) ಅಂಗೀಕರಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಸಚಿನ್ ತೆಂಡೊಲ್ಕರ್, ವಿನೇಶ್ ಫೋಗಟ್ ನ್ಯಾಯಯುತವಾಗಿ ಫೈನಲ್ ಗೆ ಅರ್ಹತೆ ಪಡೆದಿದ್ದರು. ಅವರ ಅರ್ಹ ಪದಕವನ್ನು ದೋಚಲಾಗಿದೆ. ಡ್ರಗ್ಸ್ ಸೇವನೆಯಂತಹ ನಿಯಮ ಉಲ್ಲಂಘನೆಗಾಗಿ ಕ್ರೀಡಾಪಟುವನ್ನು ಅನರ್ಹಗೊಳಿಸಿದ್ದರೆ ಅದಕ್ಕೆ ಅರ್ಥವಿರುತಿತ್ತು. ಆ ಸಂದರ್ಭದಲ್ಲಿ ಯಾವುದೇ ಪದಕ ನೀಡದಿರುವುದು ಮತ್ತು ಕೊನೆಯ ಸ್ಥಾನ ಪಡೆಯುವುದು ಸಮರ್ಥನೀಯವಾಗಿರುತ್ತದೆ. ಆದರೆ, ವಿನೇಶ್ ತನ್ನ ಎದುರಾಳಿಯನ್ನು ಸೋಲಿಸಿ ಅಗ್ರ ಎರಡನೇ ಸ್ಥಾನ ತಲಪಲು ಶ್ರಮಿಸಿದ್ದು,ಆಕೆ ಬೆಳ್ಳಿ ಪದಕಕ್ಕೆ ಅರ್ಹಳು ಎಂದು ಸಚಿನ್ ತೆಂಡೊಲ್ಕರ್ ತಿಳಿಸಿದ್ದಾರೆ.
Advertisement