
ಪ್ಯಾರಿಸ್: ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ಹಲವು ಅಚ್ಚರಿ ಫಲಿತಾಂಶಗಳಿಗೆ ವೇದಿಕೆಯಾಗಿದ್ದು ನೆದರ್ಲೆಂಡ್ ನ ಬ್ರೇಕ್ ಡ್ಯಾನ್ಸಿಂಗ್ ಸ್ಪರ್ಧಿ ತಮ್ಮ ಅಮೋಘ ಪ್ರದರ್ಶನದ ಮೂಲಕ ತಾವಾಡಿದ ಒಲಿಂಪಿಕ್ಸ್ ನ ಮೊದಲ ಪಂದ್ಯವನ್ನೇ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ.
ಹೌದು.. ಆಕೆಯ ಹೆಸರು ಇಂಡಿಯಾ ಸರ್ಡ್ಜೋ.. ನೆದರ್ಲೆಂಡ್ ದೇಶದ ಬ್ರೇಕ್ ಡ್ಯಾನ್ಸಿಂಗ್ ಅಥ್ಲೀಟ್.. ಒಲಿಂಪಿಕ್ಸ್ ನಲ್ಲಿ ತಮ್ಮ ಮೊದಲ ಪಂದ್ಯವನ್ನೇ ಗಮನಾರ್ಹ ಅಂಕಗಳ ಮೂಲಕ ಗೆದ್ದು ಪದಕ ಗಳಿಸುವ ಭರವಸೆ ಮೂಡಿಸಿದ್ದರು.
ಆಫ್ಘಾನಿಸ್ತಾನದ ಮನಿಝಾ ತಲಾಶ್ ರನ್ನು ಮಣಿಸಿ ಇಂಡಿಯಾ ಸರ್ಡ್ಜೋ ಈ ಸಾಧನೆ ಮಾಡಿದ್ದರು. ಆದರೆ ಸೆಮಿ ಫೈನಲ್ ನಲ್ಲಿ ಚೀನಾದ ಅಭ್ಯರ್ಥಿ ವಿರುದ್ಧ ಸೋತು 4ನೇ ಸ್ಥಾನಕ್ಕೆ ಕುಸಿದು ಪೋಡಿಯಂ ಫಿನಿಶ್ ಮಿಸ್ ಮಾಡಿಕೊಂಡರು.
ಸರ್ಡ್ಜೋ ಡಚ್ ತಂಡದ ಪರ ನೀಡಿದ ಪ್ರದರ್ಶನ ನೆರೆದಿದ್ದವರ ಹುಬ್ಬೇರಿಸಿತ್ತು. ಇನ್ನು ಇದೇ ವಿಭಾಗದಲ್ಲಿ ಜಪಾನ್‌ನ 26 ವರ್ಷದ ಅಮಿ ಶನಿವಾರ ನಡೆದ ಫೈನಲ್‌ನಲ್ಲಿ ಲಿಥುವೇನಿಯಾದ ನಿಕಾ ಅವರನ್ನು 3-0 ಅಂತರದಿಂದ ಸೋಲಿಸಿ ಬಿ-ಗರ್ಲ್ ಬ್ಯಾಟಲ್ಸ್‌ನಲ್ಲಿ ಚಿನ್ನ ಗೆದ್ದರು. ಬಿ-ಬಾಯ್ಸ್ ಬ್ಯಾಟಲ್ಸ್‌ನಲ್ಲಿ ಕೆನಡಾದ ಫಿಲ್ ವಿಝಾರ್ಡ್ ಪ್ಯಾರಿಸ್ ನ ಡ್ಯಾನಿ ಡ್ಯಾನ್ ಅವರನ್ನು ಸೋಲಿಸುವ ಮೂಲಕ ಚಿನ್ನಗೆದ್ದರು.
ಆಫ್ಘನ್ ಮಹಿಳೆಯರ ಪರ ಧನಿ ಎತ್ತಿದ ಸ್ಪರ್ಧಿ ಅನರ್ಹ
ಇನ್ನು ಅಫ್ಘಾನಿಸ್ತಾನದ ನಿವಾಸಿ ಮತ್ತು ನಿರಾಶ್ರಿತರ ತಂಡದ ಪರವಾಗಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಬ್ರೇಕ್ ಡ್ಯಾನ್ಸರ್ ಮನಿಝಾ ತಲಾಶ್ ಅವರನ್ನು ಶುಕ್ರವಾರ ಅನರ್ಹಗೊಳಿಸಲಾಯಿತು. ವಾಸ್ತವವಾಗಿ, ಪ್ರಿ-ಕ್ವಾಲಿಫೈಯರ್ ಸಮಯದಲ್ಲಿ, ಅವರು 'ಫ್ರೀ ಅಫ್ಘಾನ್ ಮಹಿಳೆಯರ' (ಅಫ್ಘಾನಿಸ್ತಾನದ ಮಹಿಳೆಯರಿಗೆ ಸ್ವಾತಂತ್ರ್ಯ ನೀಡಿ) ಘೋಷಣೆಯ ಉಡುಪನ್ನು ಧರಿಸಿದ್ದರು. 21ರ ಹರೆಯದ ಬ್ರೇಕ್ ಡ್ಯಾನ್ಸರ್ ಇಂಡಿಯಾ ಸರ್ಡ್ಜೋ ವಿರುದ್ಧ ಸೋತಿದ್ದರಿಂದ ಅನರ್ಹಗೊಳಿಸದಿದ್ದರೂ ಮುನ್ನಡೆಯಲು ಸಾಧ್ಯವಾಗುತ್ತಿರಲಿಲ್ಲ.
ಒಲಿಂಪಿಕ್ಸ್ ಕ್ರೀಡಾಕೂಟದ ಆಟದ ಮೈದಾನ ಮತ್ತು ವೇದಿಕೆಯಲ್ಲಿ ರಾಜಕೀಯ ಹೇಳಿಕೆಗಳು ಮತ್ತು ಘೋಷಣೆಗಳನ್ನು ನಿಷೇಧಿಸಲಾಗಿದೆ. ವರ್ಲ್ಡ್ ಡ್ಯಾನ್ಸ್‌ಸ್ಪೋರ್ಟ್ ಫೆಡರೇಶನ್ ಇದೇ ಪ್ರಕರಣದ ವಿಚಾರವಾಗಿ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರಿ-ಕ್ವಾಲಿಫೈಯರ್ ಸ್ಪರ್ಧೆಯ ಸಮಯದಲ್ಲಿ ತನ್ನ ವೇಷಭೂಷಣದ ಮೇಲೆ ರಾಜಕೀಯ ಘೋಷಣೆಯನ್ನು ಪ್ರದರ್ಶಿಸಿದ್ದಕ್ಕಾಗಿ ಆಕೆಯನ್ನು ಅನರ್ಹಗೊಳಿಸಲಾಗಿದೆ ಎಂದು ತಿಳಿಸಿದೆ. ಅಂದಹಾಗೆ ಆಫ್ಘಾನ್ ಸ್ಪರ್ಧಿ ತಲಾಶ್ 2021 ರಲ್ಲಿ ಅಫ್ಘಾನಿಸ್ತಾನವನ್ನು ತೊರೆದು ಸ್ಪೇನ್‌ನಲ್ಲಿ ಆಶ್ರಯ ಪಡೆದಿದ್ದಾರೆ.
Advertisement