
ಸಿಂಗಾಪುರ: ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಇತಿಹಾಸ ನಿರ್ಮಿಸಿದೆ. ಭಾರತದ ಚೆಸ್ ಆಟಗಾರ ಡಿ ಗುಕೇಶ್ ವಿಶ್ವ ಚಾಂಪಿಯನ್ ಆಗಿದ್ದಾರೆ. ಗುಕೇಶ್ ಡಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದರು. ಭಾರತದ 18 ವರ್ಷದ ಗ್ರ್ಯಾಂಡ್ ಮಾಸ್ಟರ್ ಗುಕೇಶ್ 14ನೇ ಹಾಗೂ ಅಂತಿಮ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ವಿಶ್ವ ಚಾಂಪಿಯನ್ ಗೌರವಕ್ಕೆ ಪಾತ್ರರಾದರು.
ಹಿಂದಿನ ವಿಶ್ವ ದಾಖಲೆಯನ್ನು ಗ್ಯಾರಿ ಕಾಸ್ಪರೋವ್ ಮಾಡಿದ್ದು 22ನೇ ವಯಸ್ಸಿಗೆ ಅನಾಟೊಲಿ ಕಾರ್ಪೋವ್ ಅವರನ್ನು ಸೋಲಿಸಿ 1985ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದರು. ಇನ್ನು ಗುಕೇಶ್ ವಿಶ್ವನಾಥನ್ ಆನಂದ್ ನಂತರ ಭಾರತದ ಎರಡನೇ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಾರೆ.
ಸಿಂಗಾಪುರದಲ್ಲಿ ನಡೆದ ಟೂರ್ನಮೆಂಟ್ ನಲ್ಲಿ ಡಿಂಗ್ 55ನೇ ನಡೆಯಲ್ಲಿ ಒಂದು ಪ್ರಮಾದ ಮಾಡಿದ್ದು ಅವರು ಪಂದ್ಯದಿಂದ ನಿರ್ಗಮಿಸುವಂತೆ ಮಾಡಿತು. ಗುಕೇಶ್ 6.5ಕ್ಕೆ 7.5 ಅಂಕಗಳ ಅಂತರದಲ್ಲಿ ಜಯಗಳಿಸಿದರು. 14ನೇ ಗೇಮ್ ಡ್ರಾದಲ್ಲಿ ಅಂತ್ಯಗೊಂಡಿದ್ದರೆ ಪಂದ್ಯ ಟೈ-ಬ್ರೇಕ್ ಆಗುತ್ತಿತ್ತು.
ಈ ವರ್ಷದ ಆರಂಭದಲ್ಲಿ, ಗುಕೇಶ್ ಅವರು ವಿಶ್ವ ಚೆಸ್ ಚಾಂಪಿಯನ್‌ಶಿಪ್‌ಗೆ ಸ್ಪರ್ಧಿಸಲು ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ಗೆದ್ದಿದ್ದರು. ನಂತರ ಅವರು ಹಂಗೇರಿಯಲ್ಲಿ ನಡೆದ ಚೆಸ್ ಒಲಂಪಿಯಾಡ್‌ನಲ್ಲಿ ಚಿನ್ನವನ್ನು ಗೆದ್ದಿದ್ದರು. ಈವೆಂಟ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗಳಿಸಲು ಸಹಾಯ ಮಾಡಿದರು.
Advertisement