
ನವದೆಹಲಿ: ಕೊನೆಯ ಕ್ಷಣದಲ್ಲಿ ವೀಸಾ ಪಡೆದು ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ ಟೂರ್ನಿಗೆ ಪ್ರವೇಶಿಸಿದ್ದ ಭಾರತದ ವಿನೇಶ್ ಫೋಗಟ್ ಚಿನ್ನ ಗೆದ್ದಿದ್ದಾರೆ.
ಮ್ಯಾಡ್ರಿಡ್ನಲ್ಲಿ ನಡೆದ ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ ಕುಸ್ತಿ ಟೂರ್ನಿಯಲ್ಲಿ ಭಾರತದ ಒಲಿಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್(Vinesh Phogat) 50 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಎದುರಾಳಿ ಮರೀರಾ ತ್ಯುಮೆರ್ಕೋವಾ ವಿರುದ್ಧ 10-5 ಅಂಕಗಳ ಭರ್ಜರಿ ಗೆಲುವು ಸಾಧಿಸಿ ಈ ಸಾಧನೆಗೈದಿದ್ದಾರೆ.
29 ವರ್ಷದ ವಿನೇಶ್ ಸೆಮಿಫೈನಲ್ ಪಂದ್ಯದಲ್ಲಿ ಕೆನಡಾದ ಕೇಟಿ ಡುಚಾಕ್ ಅವರನ್ನು 9-4 ಅಂಕಗಳಿಂದ ಸೋಲಿಸಿ ಫೈನಲ್ಗೆ ಲಗ್ಗೆ ಇಟ್ಟಿದ್ದರು. ಫೈನಲ್ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡರು.
ಈ ಹಿಂದೆ ಭಾರತೀಯ ಕುಸ್ತಿ ಒಕ್ಕೂಟದ ವಿರುದ್ಧ ತೊಡೆತಟ್ಟಿ ದೇಶದ ಪರಮೋಚ್ಚ ಕ್ರೀಡಾ ಪ್ರಶಸ್ತಿಯಾದ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಮತ್ತು ಅರ್ಜುನ್ ಪ್ರಶಸ್ತಿಯನ್ನು ಹಿಂದಿರುಗಿಸಿದ ವಿಚಾರದಲ್ಲಿ ವಿನೇಶ್ ಫೋಗಟ್ ದೊಡ್ಡ ಸುದ್ದಿಯಾಗಿದ್ದರು. ಈ ಹಿಂದೆ 55 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ವಿನೇಶ್ ಈಗ 50 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ.
Advertisement