
ಪ್ಯಾರಿಸ್: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮತ್ತೆ ಕೋವಿಡ್-19 ಸೋಂಕಿನ ಆತಂಕ ಶುರುವಾಗಿದ್ದು, ಈ ಹಿಂದೆ ಈಜು ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಅಥ್ಲೀಟ್ ಗೆ ಸೋಂಕು ದೃಢಪಟ್ಟಿದೆ.
ಹೌದು.. ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ (Paris Olympics 2024) 100 ಮೀಟರ್ ಬ್ರೆಸ್ಟ್ಸ್ಟ್ರೋಕ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿರುವ ಬ್ರಿಟಿಷ್ ಈಜುಗಾರ ಆಡಮ್ ಪೀಟಿ ಅವರಿಗೆ ಕೋವಿಡ್ ಸೋಂಕು ತಗುಲಿದೆ.
ಈ ಕುರಿತು ಸೋಮವಾರ ಅವರ ತಂಡ ಈ ಮಾಹಿತಿಯನ್ನು ನೀಡಿದೆ. ಸ್ಪರ್ಧೆಯ ದಿನದಂದು ತಮಗೆ ಅನಾರೋಗ್ಯವಿತ್ತು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.
ಆದರೆ ಚಿನ್ನ ಗೆಲ್ಲದೇ ಇರಲು ಅದನ್ನೇ ನೆಪವಾಗಿ ಬಳಸಲು ನಿರಾಕರಿಸಿದರು. ಪೀಟಿ ರೇಸ್ ನಂತರ ಗಂಟಲು ನೋವಿನಿಂದ ಮಾತನಾಡಲು ಹೆಣಗಾಡಿದ್ದರು. “ಫೈನಲ್ ಪಂದ್ಯದ ನಂತರದ ಕೆಲವೇ ಗಂಟೆಗಳಲ್ಲಿ, ಅವರ ರೋಗಲಕ್ಷಣಗಳು ಉಲ್ಬಣಗೊಂಡಿದ್ದು, ಸೋಮವಾರ ಮುಂಜಾನೆ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಯಿತು. ಆ ಸಮಯದಲ್ಲಿ ಅವರು ಪಾಸಿಟಿವ್ ಎಂದು ಗೊತ್ತಾಯಿತು” ಎಂದು ತಂಡದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈಜಿನಲ್ಲಿ ಗೆದ್ದಿರುವ ಅವರು ರಿಲೇ ಸ್ಪರ್ಧೆಗಳಿಗೆ ಮತ್ತೆ ಮರಳುವ ಭರವಸೆ ಅವರು ಹೊಂದಿದ್ದಾರೆ. “ಅನಾರೋಗ್ಯದ ಯಾವುದೇ ಪ್ರಕರಣದಂತೆ, ಪರಿಸ್ಥಿತಿಯನ್ನು ಸೂಕ್ತವಾಗಿ ನಿರ್ವಹಿಸಲಾಗುತ್ತಿದೆ. ಆರೋಗ್ಯವಾಗಿರಲು ಎಲ್ಲಾ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ ತಂಡದ ಅಧಿಕಾರಿಗಳು ಹೇಳಿದ್ದಾರೆ.
ಪೀಟಿ ಅವರು ಸ್ಪರ್ಧೆಯಲ್ಲಿ ಅವರು ಇಟಲಿಯ ನಿಕೊಲೊ ಮಾರ್ಟಿನೆಂಗಿ ಅವರಿಗಿಂತ 0.02 ಸೆಕೆಂಡುಗಳ ಹಿಂದೆ ಬಿದ್ದ ಕಾರಣ ಬೆಳ್ಳಿ ಗೆದ್ದಿದ್ದರು. ಪೀಟಿ ಅಮೆರಿಕದ ನಿಕ್ ಫಿಂಕ್ ಅವರೊಂದಿಗೆ ಬೆಳ್ಳಿ ಹಂಚಿಕೊಂಡಿದ್ದರು.
Advertisement