ವಾಷಿಂಗ್ಟನ್: 2024ರ ಬಾಕ್ಸಿಂಗ್ ಜಗತ್ತಿನ ಅತೀ ದೊಡ್ಡ ಮ್ಯಾಚ್ ಎಂದೇ ಕರೆಯಲಾಗುತ್ತಿದ್ದ ಬಾಕ್ಸಿಂಗ್ ದಂತಕಥೆ Mike Tyson ಮತ್ತು ಜೇಕ್ ಪಾಲ್ ನಡುವಿನ ಹೈವೋಲ್ಟೇಜ್ ಪಂದ್ಯ ಮುಕ್ತಾಯವಾಗಿದ್ದು, ಅನಿರೀಕ್ಷಿತ ಫಲಿತಾಂಶದಲ್ಲಿ Jake Paul ಭರ್ಜರಿ ಗೆಲುವು ಸಾಧಿಸಿದ್ದಾರೆ.
ಹೌದು.. 20 ವರ್ಷಗಳ ಬಳಿಕ ಮತ್ತೆ ಬಾಕ್ಸಿಂಗ್ ರಿಂಗ್ ಬಂದ ಮೈಕ್ ಟೈಸನ್ ವಿರುದ್ಧ ತೊಡೆ ತಟ್ಟಿ ನಿಂತಿದ್ದ ಜೇಕ್ ಪಾಲ್ ಕೊನೆಗೂ ಗೆದ್ದು ಬೀಗಿದ್ದಾರೆ. 58 ವರ್ಷದ ಮೈಕ್ ಟೈಸನ್ ವಿರುದ್ಧ ಸೆಣಸಿದ್ದ ಜೇಕ್ ಪಾಲ್ ಭರ್ಜರಿ ಹೋರಾಟ ನೀಡಿ 79-73 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
58 ವರ್ಷದ ಮೈಕ್ ಟೈಸನ್ ನಿಧಾನಗತಿ ಆಟದಿಂದ ಯೂಟ್ಯೂಬರ್ ಬಾಕ್ಸರ್ ಜೇಕ್ ಪೌಲ್ ಗೆದ್ದಿದ್ದಾರೆ. ಮೊದಲ ಎರಡು ಸುತ್ತಿನಲ್ಲಿ ಟೈಸನ್ ಟಫ್ ಫೈಟ್ ಗೆದ್ದಿದ್ದರು. ಆದರೆ ಬಳಿಕ ಜೇಕ್ ಬಲವಾದ ಪಂಚ್ ಗಳ ಮೂಲಕ ಅಂಕಗಳಿಕೆ ಮಾಡಿಕೊಂಡರು.
ಇದೀಗ ಬಹು ನಿರೀಕ್ಷಿತ ಫೈಟ್ ನಲ್ಲಿ ಜೇಕ್ ಪಾಲ್ ಸರ್ವಾನುಮತದಿಂದ ಟೈಸನ್ ವಿರುದ್ಧ ಗೆದ್ದು ಬೀಗಿದ್ದಾರೆ. ಪಂದ್ಯದ ಮುಕ್ತಾಯದ ನಿಮಿಷಗಳಲ್ಲಿ ಜೇಕ್ ಪಾಲ್ ಮೈಕ್ ಟೈಸನ್‌ಗೆ ನಮಸ್ಕರಿಸಿದರು.
ಪಂದ್ಯಕ್ಕೂ ಮೊದಲೇ ಕಪಾಳ ಮೋಕ್ಷ ಮಾಡಿದ್ದ ಟೈಸನ್
58 ವರ್ಷದ ಮಾಜಿ ವಿಶ್ವ ಹೆವಿವೇಯ್ಟ್ ಚಾಂಪಿಯನ್ ಮೈಕ್ ಟೈಸನ್ ಮತ್ತೆ ಬಾಕ್ಸಿಂಗ್ ರಿಂಗ್ ಮರಳುತ್ತಿದ್ದಾರೆ ಎಂದಾಗಲೇ ವ್ಯಾಪಕ ಸುದ್ದಿಯಾಗಿತ್ತು. ಟೈಸನ್ ವಿರುದ್ಧ ಯಾರು ಸೆಣಸುತ್ತಿದ್ದಾರೆ ಎಂದು ಅಭಿಮಾನಿಗಳು ವ್ಯಾಪಕ ಶೋಧ ನಡೆಸಿದ್ದರು. ಬಳಿಕ ಟೈಸನ್ ಗೆ 27 ವರ್ಷದ ಯುವ ಬಾಕ್ಸರ್ ಹಾಗೂ ಯೂಟ್ಯೂಬರ್ ಸವಾಲೆಸೆದಿದ್ದಾನೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತ್ತು.
ಇನ್ನು ತೂಕ ಪರೀಕ್ಷೆ ಮಾಡುವ ಮಾಡುವಾಗ ಮೈಕ್ ಟೈಸನ್ ಜೇಕ್ ಪೌಲ್ ಕೆನ್ನೆಗೆ ಬಾರಿಸಿದ್ದರು. ಟೈಸನ್ ಕಾಲು ತುಳಿದಿದ್ದ ಪೌಲ್‌ಗೆ ಎಲ್ಲರ ಮುಂದೆಯೇ ಬಾರಿಸಿದ್ದರು. ನಾನು ಈ ಪಂದ್ಯವನ್ನು ಸೋಲುವ ಮಾತೇ ಇಲ್ಲ ಅಂತ ಕೂಡ ಹೇಳಿದ್ದರು.
2003ರಲ್ಲಿ ಮೈಕ್ ಟೈಸನ್ ಕೊನೆಯದಾಗಿ ಪಂದ್ಯವನ್ನು ಗೆದ್ದಿದ್ದರು. 2004 ಮತ್ತು 2005ರಲ್ಲಿ ಸೋಲನುಭವಿಸಿದ ಬಳಿಕ ಬಾಕ್ಸಿಂಗ್‌ನಿಂದ ದೂರ ಉಳಿದಿದ್ದರು. 20 ವರ್ಷಗಳ ಬಳಿಕ ಅವರು ಮತ್ತೆ ಬಾಕ್ಸಿಂಗ್‌ಗೆ ಮರಳಿದ್ದರು. ಈ ಪಂದ್ಯ ಘೋಷಣೆಯಾದಾಗಿನಿಂದಲೂ ಮೈಕ್ ಟೈಸನ್ ಮತ್ತು ಜೇಕ್ ಪಾಲ್ ನಡುವೆ ಸಂಘರ್ಷಗಳು ನಡೆಯುತ್ತಲೇ ಇತ್ತು.
ಪಂದ್ಯದ ಪ್ರಚಾರ ಕಾರ್ಯಕ್ರಮದಲ್ಲಿ ತನ್ನ ಕಾಲು ತುಳಿದ ಎಂದು ಆಕ್ರೋಶಗೊಂಡಿದ್ದ ಟೈಸನ್ ಜೇಕ್ ಪಾಲ್ ಗೆ ಕಪಾಳಮೋಕ್ಷ ಕೂಡ ಮಾಡಿದ್ದರು. ಇದನ್ನು ನಗುತ್ತಲೇ ಸ್ವೀಕರಿಸಿದ್ದ ಜೇಕ್ ಪಾಲ್ ಬಾಕ್ಸಿಂಗ್ ರಿಂಗ್ ನಲ್ಲಿ ತಮ್ಮ ಸೇಡು ತೀರಿಸಿಕೊಂಡಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಪಂದ್ಯದ ವಿಡಿಯೋ ಇದೆ.
338 ಕೋಟಿ ಗೆದ್ದ ಜೇಕ್ ಪಾಲ್
ಇನ್ನು ಈ ಬಹು ನಿರೀಕ್ಷಿತ ಪಂದ್ಯದಲ್ಲಿ ಜಯಭೇರಿ ಭಾರಿಸಿದ ಜೇಕ್ ಪಾಲ್ ಬರೊಬ್ಬರಿ 338 ಕೋಟಿ ರೂ ($40 million) ಮೊತ್ತದ ಬಹುಮಾನ ಸ್ವೀಕರಿಸಿದ್ದು, ಟೈಸನ್ ಕೂಡ 150 ಕೋಟಿ ರೂ ($20 million) ಮೊತ್ತ ಸ್ವೀಕರಿಸಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ.
Advertisement