ಪ್ಯಾರಿಸ್: ಪ್ಯಾರಿಸ್ ನಲ್ಲಿ ನಡೆಯುತ್ತಿರುವ Paralympics 2024 ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಜಾವೆಲಿನ್ ಥ್ರೋ ಫೈನಲ್ ನಲ್ಲಿ ಭಾರತದ ಸುಮಿತ್ ಅಂಟಿಲ್ ಅಗ್ರಸ್ಥಾನ ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದ ಭಾರತದ ಅಥ್ಲೀಟ್ ಸುಮಿತ್ ಅಂಟಿಲ್ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲೂ ತಮ್ಮ ಅಧ್ಭುತ ಪ್ರದರ್ಶನ ಮುಂದುವರೆಸಿದ್ದಾರೆ.
ಪುರುಷರ ಜಾವೆಲಿನ್ ಥ್ರೋ (ಎಫ್64 ವಿಭಾಗ)ದಲ್ಲಿ ಸುಮಿತ್ ಆಂಟಿಲ್ ತಮ್ಮ ಎರಡನೇ ಪ್ರಯತ್ನದಲ್ಲಿ ಜಾವೆಲಿನ್ ಅನ್ನು 70.59 ಮೀಟರ್ ಎಸೆದು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಸುಮಿತ್ ಆಂಟಿಲ್ ಅವರ ಈ ಥ್ರೋ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಇತಿಹಾಸದಲ್ಲೇ (ಎಫ್ 64 ವಿಭಾಗ) ಅತ್ಯುತ್ತಮ ಥ್ರೋ ಆಗಿದೆ.
ಸುಮಿತ್ ಚಿನ್ನದ ಪದಕ ಗೆಲ್ಲುವುದರೊಂದಿಗೆ ಪ್ರಸಕ್ತ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಭಾರತ ಇದುವರೆಗೆ ಮೂರು ಚಿನ್ನ, ಐದು ಬೆಳ್ಳಿ ಮತ್ತು ಆರು ಕಂಚಿನ ಪದಕಗಳನ್ನು ಗೆದ್ದಿದೆ. ಈ ಸ್ಪರ್ಧೆಯಲ್ಲಿ ಶ್ರೀಲಂಕಾದ ದುಲಾನ್ ಕೊಡಿತುವಕ್ಕು (67.03 ಮೀಟರ್ಸ್) ಬೆಳ್ಳಿ ಹಾಗೂ ಆಸ್ಟ್ರೇಲಿಯಾದ ಮಿಚೆಲ್ ಬುರಿಯನ್ (64.89 ಮೀಟರ್ಸ್) ಕಂಚಿನ ಪದಕ ಗೆದ್ದರು. ಇದೇ ಸ್ಪರ್ಧೆಯಲ್ಲಿ ಭಾರತದ ಸಂದೀಪ್ ಚೌಧರಿ (62.80 ಮೀಟರ್) ನಾಲ್ಕನೇ ಸ್ಥಾನದಲ್ಲಿದ್ದಾರೆ.
ತಮ್ಮದೇ ದಾಖಲೆ ಮುರಿದ ಸುಮಿತ್
ಇನ್ನು ಈ ಪಂದ್ಯದಲ್ಲಿ ಸುಮಿತ್ ಆಂಟಿಲ್ ಅವರು ತಮ್ಮದೇ ಆದ ಪ್ಯಾರಾಲಿಂಪಿಕ್ ದಾಖಲೆಯನ್ನು ಮುರಿದರು. ಇದಕ್ಕೂ ಮೊದಲು ಸುಮಿತ್ ತಮ್ಮ ಮೊದಲ ಪ್ರಯತ್ನದಲ್ಲಿ 69.11 ಮೀಟರ್‌ಗಳನ್ನು ಎಸೆದರು. ಇದು ಹೊಸ ಪ್ಯಾರಾಲಿಂಪಿಕ್ ದಾಖಲೆಯಾಗಿತ್ತು. ಇದಾದ ಬಳಿಕ ಎರಡನೇ ಪ್ರಯತ್ನದಲ್ಲಿ ಮತ್ತೊಮ್ಮೆ 70.59 ಮೀಟರ್ ಜಾವೆಲಿನ್ ಎಸೆದು ತಮ್ಮದೇ ದಾಖಲೆಯನ್ನು ಮುರಿದರು. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲೂ ಸುಮಿತ್ ಚಿನ್ನದ ಪದಕ ಗೆದ್ದಿದ್ದರು.
Advertisement