
ನವದೆಹಲಿ: 2024 ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದು ಹೊಸ ದಾಖಲೆ ಮಾಡಿರುವ ಭಾರತೀಯ ಪುರುಷರ ಹಾಕಿ ತಂಡ ತವರಿಗೆ ಮರಳಿದೆ. ಗುರುವಾರ ನಸುಕಿನಲ್ಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ತಂಡವನ್ನು ಅದ್ದೂರಿ ಸ್ವಾಗತ ನೀಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ನಂತರ ವಿಮಾನ ನಿಲ್ದಾಣದಲ್ಲಿ ಆಟಗಾರರು ಹಾಗೂ ಮ್ಯಾನೇಜಿಂಗ್ ಕಮಿಟಿ ಸದಸ್ಯರು ಗ್ರೂಪ್ ಫೋಟೋ ತೆಗೆಸಿಕೊಂಡರು. ಮಂಗಳವಾರ ನಡೆದ ಫೈನಲ್‌ನಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ತಂಡ ಆತಿಥೇಯ ಚೀನಾವನ್ನು 1-0 ಗೋಲುಗಳಿಂದ ಸೋಲಿಸಿ ಐದನೇ ಬಾರಿಗೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಕಂಚಿನ ಪದಕ ಗೆದ್ದಿದ್ದ ಭಾರತ ಫೈನಲ್ ನಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಲೀಗ್ ನಲ್ಲಿ ಜಪಾನ್ ವಿರುದ್ಧ 5-1, ಮಲೇಷ್ಯಾ ವಿರುದ್ಧ 8-1, ಕೋರಿಯಾ ವಿರುದ್ಧ 3-1, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 2-1 ಅಂತರದ ಗೆಲುವಿನೊಂದಿಗೆ ಅಗ್ರಸ್ಥಾನಕ್ಕೇರಿದ್ದ ಭಾರತ ಫೈನಲ್ ಪಂದ್ಯದಲ್ಲಿ ಚೀನಾ ವಿರುದ್ಧ ಜುಗರಾಜ್ ಸಿಂಗ್ ದಾಖಲಿಸಿದ್ದ ಏಕೈಕ ಗೋಲ್ ನೊಂದಿಗೆ ಸತತ ಐದನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಕ್ಕಿತ್ತು.
ಏಷ್ಯನ್ ಚಾಂಪಿಯನ್ಸ್ ವಿಜೇತ ಭಾರತ ತಂಡದ ಪ್ರತಿ ಆಟಗಾರರಿಗೆ ತಲಾ 3 ಲಕ್ಷ ರೂ ಹಾಗೂ ಸಹಾಯಕ ಸಿಬ್ಬಂದಿಗೆ 1.5 ಲಕ್ಷ ರೂ. ಬಹುಮಾನವನ್ನು ಹಾಕಿ ಇಂಡಿಯಾ ಘೋಷಿಸಿದೆ.
Advertisement