ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2024 ರ ಫೈನಲ್‌ನಲ್ಲಿ ಭಾರತ 1-0 ಗೋಲುಗಳಿಂದ ಚೀನಾವನ್ನು ಸೋಲಿಸುವ ಮೂಲಕ ಚಾಂಪಿಯನ್ಸ್ ಪಟ್ಟ ಮುಡಿಗೇರಿಸಿಕೊಂಡಿದೆ. ಮೊದಲ ಮೂರು ಕ್ವಾರ್ಟರ್‌ಗಳು ಗೋಲುರಹಿತವಾಗಿ ಉಳಿದ ನಂತರ, ಟೀಮ್ ಇಂಡಿಯಾ ಅಂತಿಮವಾಗಿ ನಾಲ್ಕನೇ ಮತ್ತು ಕೊನೆಯ ಕ್ವಾರ್ಟರ್‌ನಲ್ಲಿ ಅದ್ಭುತ ಗೋಲು ಗಳಿಸಿ 1-0 ಮುನ್ನಡೆ ಸಾಧಿಸಿತು.
ಭಾರತದ ಪರ ಜುಗ್ರಾಜ್ ಪಂದ್ಯದ ಏಕೈಕ ಗೋಲು ದಾಖಲಿಸಿದರು. ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಗೆದ್ದಿರುವುದು ಇತಿಹಾಸದಲ್ಲಿ ಇದು ಐದನೇ ಬಾರಿ. ಪಂದ್ಯದ ಆರಂಭದಲ್ಲಿ ಚೀನಾ ಆಕ್ರಮಣಕಾರಿ ಧೋರಣೆ ಅನುಸರಿಸಿ ಭಾರತದ ರಕ್ಷಣಾ ಪಡೆಗೆ ಹಿನ್ನಡೆಯಾಯಿತು. ಮೊದಲ ಕ್ವಾರ್ಟರ್‌ನಲ್ಲಿ ಭಾರತಕ್ಕೆ ಎರಡು ಪೆನಾಲ್ಟಿ ಕಾರ್ನರ್ ಸಿಕ್ಕಿತು. ಆದರೆ ಎರಡೂ ಬಾರಿ ಚೀನಾದ ಗೋಲ್‌ಕೀಪರ್ ತನ್ನ ಗೋಲ್ ಪೋಸ್ಟ್ ಅನ್ನು ಸುರಕ್ಷಿತವಾಗಿರಿಸಿಕೊಂಡರು. ಎರಡು ಮತ್ತು ಮೂರನೇ ಕ್ವಾರ್ಟರ್‌ನಲ್ಲೂ ಉಭಯ ತಂಡಗಳು ಗೋಲು ಗಳಿಸಲು ಶಕ್ತಿಮೀರಿ ಪ್ರಯತ್ನಿಸಿದವು. ಆದರೆ ಪಂದ್ಯದ ಏಕೈಕ ಗೋಲು 51ನೇ ನಿಮಿಷದಲ್ಲಿ ಬಂದಿತು.
ಈ ಗೆಲುವಿನೊಂದಿಗೆ ಭಾರತ ಚಿನ್ನದ ಪದಕ ಹಾಗೂ ಚೀನಾ ಬೆಳ್ಳಿ ಪದಕ ಗೆದ್ದುಕೊಂಡಿದೆ. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ 5-2 ಗೋಲುಗಳಿಂದ ದಕ್ಷಿಣ ಕೊರಿಯಾವನ್ನು ಸೋಲಿಸಿತ್ತು. ಕೊನೆಯ ಕ್ಷಣಗಳಲ್ಲಿ ಚೀನಾದ ಆಟಗಾರರು ಚೆಂಡನ್ನು ಹೆಚ್ಚು ಹೊತ್ತು ತಮ್ಮ ಹಿಡಿತದಲ್ಲಿಟ್ಟುಕೊಂಡರೂ ಭಾರತದ ರಕ್ಷಣಾ ವಿಭಾಗವೂ ಅಮೋಘವಾಗಿತ್ತು. ಇದಕ್ಕೂ ಮುನ್ನ ಭಾರತ ಮತ್ತು ಚೀನಾ ತಂಡಗಳು ಗ್ರೂಪ್ ಹಂತದಲ್ಲಿ ಮುಖಾಮುಖಿಯಾಗಿದ್ದು, ಟೀಮ್ ಇಂಡಿಯಾ 3-0 ಅಂತರದ ಸುಲಭ ಜಯ ದಾಖಲಿಸಿತ್ತು.
ಭಾರತ ಯಾವಾಗ ಪ್ರಶಸ್ತಿ ಗೆದ್ದಿತ್ತು?
ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು 2011ರಲ್ಲಿ ಪ್ರಾರಂಭಿಸಲಾಯಿತು. ಅಲ್ಲಿ ಭಾರತವು ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಪಾಕಿಸ್ತಾನವನ್ನು 4-2 ಗೋಲುಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆ ಬಳಿಕ 2016ರಲ್ಲಿ ಭಾರತ ಮತ್ತೊಮ್ಮೆ ಪಾಕಿಸ್ತಾನವನ್ನು 3-2 ಅಂತರದಿಂದ ಸೋಲಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. 2018 ರಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಜಂಟಿ ವಿಜೇತರು ಎಂದು ಘೋಷಿಸಲಾಯಿತು. 2023 ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಭಾರತವು ಮಲೇಷ್ಯಾವನ್ನು 4-3 ರಿಂದ ಸೋಲಿಸುವ ಮೂಲಕ ನಾಲ್ಕನೇ ಬಾರಿಗೆ ಈ ಟ್ರೋಫಿಯನ್ನು ಗೆದ್ದುಕೊಂಡಿತು.
Advertisement