
ಚಂಡಿಗಢ: ಹೆಚ್ಚು ತೂಕದ ಕಾರಣದಿಂದಾಗಿ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ವಂಚಿತರಾಗಿದ್ದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಹರಿಯಾಣ ಸರ್ಕಾರದ ಬಿಜೆಪಿ ಸರ್ಕಾರದಿಂದ ನಗದು ಪುರಸ್ಕಾರ ಪಡೆದಿದ್ದಾರೆ.
ಹೌದು.. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ವಂಚಿತರಾಗಿದ್ದ ವಿನೇಶ್ ಫೋಗಟ್ ಗೆ ಹರ್ಯಾಣ ಸರ್ಕಾರ ಬೆಳ್ಳಿ ಪದಕಕ್ಕೆ ಸರಿಸಮಾನವಾಗಿ ಪುರಸ್ಕಾರ ನೀಡಲು ನಿರ್ಧರಿಸಿತ್ತು. ಅದರಂತೆ ವಿನೇಶ್ ಮುಂದೆ ನಿವೇಶನ, ಸರ್ಕಾರಿ ಉದ್ಯೋಗ ಮತ್ತು 4 ಕೋಟಿ ನಗದು ಹಣ ನೀಡುವ ಆಯ್ಕೆಗಳನ್ನು ಮುಂದಿಟ್ಟಿತ್ತು. ಈ ಪೈಕಿ ಇದೀಗ ವಿನೇಶ್ ಫೋಗಟ್ ಇದೀಗ 4 ಕೋಟಿ ರೂಗಳ ನಗದು ಪುರಸ್ಕಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಒಲಿಂಪಿಕ್ಸ್‌ನಲ್ಲಿ 50 ಕೆ.ಜಿ. ತೂಕದ ಮಹಿಳೆಯರ ವಿಭಾಗದಲ್ಲಿ ಅಂತಿಮ ಸುತ್ತಿಗೂ ಮೊದಲು ದೇಹತೂಕ ಕೊಂಚ ಹೆಚ್ಚಾದ ಕಾರಣದಿಂದ ವಿನೇಶ್ ಫೋಗಟ್ ಅನರ್ಹಗೊಂಡಿದ್ದರು. ಅವರ ತೂಕ ನಿರ್ವಹಣೆಗೆ ಭಾರತದ ಒಲಿಂಪಿಕ್ಸ್ ತಂಡ ಸಾಕಷ್ಟು ಹರಸಾಹಸವನ್ನೇ ಪಟ್ಟಿತ್ತು. ಆದಾಗ್ಯೂ ಅವರ ತೂಕ ಕೆಲವೇ ಗ್ರಾಂಗಳಷ್ಟು ಹೆಚ್ಚಾಗಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿತ್ತು.
ಒಂದು ವೇಳೆ ಆ ಅಂತಿಮ ಸುತ್ತಿನಲ್ಲಿ ವಿನೇಶ್ ಅರ್ಹತೆ ಪಡೆದು ಸೋತಿದ್ದರೂ ಭಾರತಕ್ಕೆ ಬೆಳ್ಳಿ ಪದಕ ಬರುತ್ತಿತ್ತು. ಆದರೆ ಅನರ್ಹಗೊಳಿಸುವ ಮೂಲಕ ಒಲಿಂಪಿಕ್ಸ್ ಆಡಳಿತ ಮಂಡಳಿ ಭಾರತೀಯರಿಗೆ ಆಘಾತ ನೀಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಇಡೀ ದೇಶದ ಕ್ರೀಡಾಭಿಮಾನಿಗಳು ವಿನೇಶ್ ಫೋಗಟ್ ಪರ ಧನಿ ಎತ್ತಿದ್ದರು. ಮೂರು ಬಾರಿ ಒಲಿಂಪಿಕ್ ಪದಕ ವಿಜೇತೆಯಾದ ಫೋಗಟ್ ಅವರ 2024ರ ಸ್ಪರ್ಧೆ ಇಡೀ ಭಾರತೀಯರ ಹೃದಯ ಗೆದ್ದಿತ್ತು.
ಒಲಿಂಪಿಕ್ಸ್ ಪದಕ ವಂಚಿತರಾದ ಫೋಗಟ್ ಅವರಿಗೆ ಬೆಳ್ಳಿ ಪದಕದ ಸರಿಸಮಾನವಾಗಿ ಉಡುಗೊರೆ ನೀಡುವುದಾಗಿ ಸರ್ಕಾರ ಘೋಷಿಸಿತು. ಮೂರರಲ್ಲಿ ಒಂದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಫೋಗಟ್‌ಗೆ ನೀಡಿತು. ಇದರಲ್ಲಿ 4 ಕೋಟಿ ರೂ ನಗದು, ಅತ್ಯುತ್ತಮ ಕ್ರೀಡಾಪಟುಗೆ ನೀಡುವ ‘ಎ‘ ಶ್ರೇಣಿಯ ನೌಕರಿ ಹಾಗೂ ಹರಿಯಾಣ ವಿಕಾಸ ಪ್ರಾಧಿಕಾರದ ನಿವೇಶನದಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಸರ್ಕಾರ ಹೇಳಿತು.
ಇದೇ ವಿಚಾರವಾಗಿ ಇತ್ತೀಚೆಗೆ ವಿಧಾನಮಂಡಲದಲ್ಲಿ ಮಾತನಾಡಿದ್ದ ಫೋಗಟ್, ‘ವಿನೇಶ್ ಅವರು ನಮ್ಮ ಮಗಳಿದ್ದಂತೆ. ಅವರಿಗೆ ರಾಜ್ಯ ಸರ್ಕಾರವು ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆಯಂತೆಯೇ ಗೌರವಿಸಲಿದೆ ಎಂದಿದ್ದರು. ಆದರೆ ಈವರೆಗೂ ಅದು ಈಡೇರಲಿಲ್ಲ’ ಎಂದು ಸರ್ಕಾರವನ್ನು ನೆನಪಿಸಿದ್ದರು.
ಅಂತೆಯೇ ‘ಇಲ್ಲಿ ಹಣ ಮುಖ್ಯವಲ್ಲ. ಬದಲಿಗೆ ಗೌರವ ಮುಖ್ಯ. ರಾಜ್ಯದ ಬಹಳಷ್ಟು ಜನರು ನಾನು ನಗದು ಪುರಸ್ಕಾರ ಸ್ವೀಕರಿಸುವಂತೆ ಸಲಹೆ ನೀಡಿದ್ದಾರೆ’ ಎಂದು ಫೋಗಟ್ ಹೇಳಿದ್ದಾರೆ. ಅಲ್ಲದೆ ಇದೀಗ ವಿನೇಶ್ ಫೋಗಟ್ 4 ಕೋಟಿ ರೂ ನಗದು ಪುರಸ್ಕಾರ ಆಯ್ಕೆ ಮಾಡಿಕೊಂಡಿದ್ದಾರೆ.
ಇದಾದ ನಂತರ ಅವರು ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ.
Advertisement