

ಹೈದರಾಬಾದ್: ನೀವು ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರನ್ನು ಭೇಟಿಯಾಗಿ, ಶುಭ ಕೋರಲು ಬಯಸುವಿರಾ? ಹಾಗಾದ್ರೆ ನಿಮಗೆ ಒಂದು ಅವಕಾಶ ಇದೆ. ಫುಟ್ಬಾಲ್ ದಿಗ್ಗಜನೊಂದಿಗೆ 15 ನಿಮಿಷಗಳ ಸಮಯ ಕಳೆಯಲು ಮತ್ತು ಶುಭಾಶಯ ಕೋರಲು 10 ಲಕ್ಷ ರೂ. ಪಾವತಿಸಿ.
ಮೂರು ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿರುವ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಫುಟ್ಬಾಲ್ ಆಡದಿದ್ದರೂ ಅಥವಾ ಡಿಫೆಂಡರ್‌ಗಳನ್ನು ಡ್ರಿಬಲ್ ಮಾಡದಿದ್ದರೂ ಸಹ, ವಿಶ್ವಕಪ್ ವಿಜೇತ ನಾಯಕನನ್ನು ನೋಡಿ ಕಣ್ತುಂಬಿಕೊಳ್ಳುವ ಕ್ರೇಜ್ ಉತ್ತುಂಗಕ್ಕೇರಿದೆ.
ಲಿಯೋನೆಲ್ ಮೆಸ್ಸಿ, ಕೋಲ್ಕತಾ, ಹೈದರಾಬಾದ್, ಮುಂಬೈ ಹಾಗೂ ದೆಹಲಿಗೆ ಭೇಟಿ ನೀಡಲಿದ್ದಾರೆ. ಪ್ರತಿ ನಗರಗಳಲ್ಲೂ ವಿಶೇಷ ಹಾಗೂ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲು ಆಯೋಜಕರು ಮುಂದಾಗಿದ್ದಾರೆ.
ಮೆಸ್ಸಿ ಡಿಸೆಂಬರ್ 14ರಂದು ಹೈದರಾಬಾದ್‌ನಲ್ಲಿ ಇರಲಿದ್ದು, 38,000 ಸೀಟ್ ಸಾಮರ್ಥ್ಯದ ಉಪ್ಪಲ್ ಕ್ರೀಡಾಂಗಣದಲ್ಲಿ ಮೆಸ್ಸಿ ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ನಡುವಿನ 20 ನಿಮಿಷಗಳ ಪಂದ್ಯ ಸೇರಿದಂತೆ ಸಂಜೆ 3 ಗಂಟೆಗಳ ಕಾಲ ವಿಶೇಷ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಟಿಕೆಟ್ ಬೆಲೆ 2250 ರೂ.ಗಳಿಂದ 9000 ರೂ.ಗಳವರೆಗೆ ಇದ್ದರೂ ಈಗಾಗಲೇ ಟಿಕೆಟ್ ಸೋಲ್ಡ್ ಔಟ್ ಆಗಿವೆ.
ಮೆಸ್ಸಿ ಅವರ ಭಾರತ ಭೇಟಿ ಶುಕ್ರವಾರ ಕೋಲ್ಕತ್ತಾದಲ್ಲಿ ಆರಂಭವಾಗಲಿದ್ದು, ಡಿಸೆಂಬರ್ 15 ರಂದು ಮುಂಬೈ ಮತ್ತು ನವದೆಹಲಿಗೆ ಹಾರುವ ಮೊದಲು ಹೈದರಾಬಾದ್‌ನಲ್ಲಿ ತಂಗಲಿದ್ದಾರೆ.
ಹೈದರಾಬಾದ್‌ನ ಫಲಕ್ನುಮಾ ಅರಮನೆಯಲ್ಲಿ ಮೆಸ್ಸಿ ಜೊತೆ ಫೋಟೋಶೂಟ್‌ಗೆ ಅವಕಾಶ ಕಲ್ಪಿಸಲಾಗಿದೆ. ಇದರ ಟಿಕೆಟ್‌ಗೆ 9.95 ಲಕ್ಷ ರೂ. ಇದ್ದು, ಜಿಎಸ್‌ಟಿ ಸೇರಿದಂತೆ 10 ಲಕ್ಷಕ್ಕೂ ಹೆಚ್ಚಾಗುತ್ತದೆ. ಟಿಕೆಟ್‌ಗಳನ್ನು ಡಿಸ್ಟ್ರಿಕ್ಟ್ ಆ್ಯಪ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ.
Advertisement