
ಲಿವರ್ ಪೂಲ್: ಲಿವರ್‌ಪೂಲ್ ತಂಡದ ಖ್ಯಾತ ಫುಟ್ಬಾಲ್ ತಾರೆ ಡಿಯೋಗೋ ಜೋಟಾ ಕಾರು ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಸ್ಪೇನ್‌ನ ಝಮೋರಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಲಿವರ್‌ಪೂಲ್ ಫುಟ್ಬಾಲ್ ತಂಡದ ಸ್ಟಾರ್ ಫಾರ್ವಡ್ ಪ್ಲೇಯರ್ ಡಿಯೋಗೋ ಜೋಟಾ ಸಾವನ್ನಪ್ಪಿದ್ದು ಅವರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅವರ ಸಹೋದರ ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಫುಟ್ಬಾಲ್ ಪಂದ್ಯಕ್ಕಾಗಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಕಾರು ಅಪಘಾತಕ್ಕೀಡಾದ ಬೆನ್ನಲ್ಲೆ ಬೆಂಕಿ ಕಾಣಿಸಿಕೊಂಡು ಇಡೀ ಕಾರು ಸುಟ್ಟು ಕರಕಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಜೋಟಾ ಹಾಗೂ ಅವರ ಸಹೋದರ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವಾಯುವ್ಯ ಝಮೊರಾ ಪ್ರಾಂತ್ಯದ ಸೆರ್ನಾಡಿಲ್ಲಾ ಪುರಸಭೆಯಲ್ಲಿ ಮಧ್ಯರಾತ್ರಿ ಕಾರೊಂದು ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿ ಬೆಂಕಿಗಾಹುತಿಯಾಗಿತ್ತು. ಈ ಅಪಘಾತದಲ್ಲಿ 28 ವರ್ಷದ ಜೋಟಾ ಮತ್ತು ಅವರ ಸಹೋದರ ಆಂಡ್ರೆ ಸಿಲ್ವಾ ಅವರ ಸಾವನ್ನಪ್ಪಿದ್ದಾರೆ ದೃಢಪಟ್ಟಿದೆ ಎಂದು ಸಿವಿಲ್ ಗಾರ್ಡ್ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.
ಜೂನ್ 22ರಂದು ಮದುವೆಯಾಗಿದ್ದ ಜೋಟಾ
ಕಾರು ಅಪಘಾತ ದುರಂತದಲ್ಲಿ ಸಾವನ್ನಪ್ಪಿದ್ದ ಜೋಟಾ ಜೂನ್ 22ರಂದು ಮದುವೆಯಾಗಿದ್ದರು. ತಮ್ಮ ಬಹುಕಾಲದ ಗೆಳತಿ Rute Cardoso ಅವರನ್ನು ಜೋಟಾ ಮದುವೆಯಾಗಿದ್ದರು. ಈ ಜೋಡಿಗೆ ಮದುವೆಗಿಂತ ಮೊದಲೇ 3 ಮಕ್ಕಳಿದ್ದರು. ಜೂನ್ 22ರಂದು ಮದುವೆಯಾಗಿದ್ದ ಜೋಟಾ ಕೆಲವೇ ದಿನ ಮಾತ್ರ ಫುಟ್ಬಾಲ್‌ನಿಂದ ದೂರ ಉಳಿದಿದ್ದರು.
ಪತ್ನಿ ಹಾಗೂ ಮಕ್ಕಳ ಜೊತೆ ಕೆಲ ದಿನ ಕಳೆದಿದ್ದ ಜೋಟಾ ಬಳಿಕ ಫುಟ್ಬಾಲ್ ಪಂದ್ಯದ ಅಭ್ಯಾಸ ಆರಂಭಿಸಿದ್ದರು. ಪೋರ್ಚುಗಲ್ ತಂಡದಲ್ಲಿ ಕ್ರಿಸ್ಟಿಯಾನೋ ರೋನಾಲ್ಡ್ ತಂಡದ ಟೀಮ್‌ಮೇಟ್ ಆಗಿದ್ದ ಜೋಟಾ, UEFA ನ್ಯಾಷನಲ್ ಲೀಗ್ ಗೆದ್ದುಕೊಂಡಿದ್ದರು. ಡಿಯಾಗೋ ಜೋಟಾ ಸೆಪ್ಟೆಂಬರ್ 2020 ರಲ್ಲಿ ವೂಲ್ವ್ಸ್‌ನಿಂದ 40 ಮಿಲಿಯನ್ ಯೂರೋಗಿಂತ ಹೆಚ್ಚಿನ ಶುಲ್ಕಕ್ಕೆ ಲಿವರ್‌ಪೂಲ್ ತಂಡಕ್ಕೆ ಸೇರಿದ್ದರು.
ಅಂದಹಾಗೆ ಡಿಯಾಗೋ ಜೋಟಾ 2019ರಿಂದ ರಾಷ್ಟ್ರೀಯ ಪೋರ್ಚುಗಲ್ ತಂಡದ ಭಾಗವಾಗಿದ್ದರು.
ಆಘಾತ ವ್ಯಕ್ತಪಡಿಸಿದ ಲಿವರ್‌ಪೂಲ್
ಡಿಯೊಗೊ ಜೋಟಾ ಅವರ ದುರಂತ ಸಾವಿನಿಂದ ತಂಡವು ದುಃಖಿತವಾಗಿದೆ ಎಂದು ಲಿವರ್‌ಪೂಲ್ ಫುಟ್‌ಬಾಲ್ ಕ್ಲಬ್ ಹೇಳಿದೆ. 'ಲಿವರ್‌ಪೂಲ್ ಎಫ್‌ಸಿ ಈ ಸಮಯದಲ್ಲಿ ಯಾವುದೇ ಹೆಚ್ಚಿನ ಕಾಮೆಂಟ್‌ಗಳನ್ನು ಮಾಡುವುದಿಲ್ಲ ಮತ್ತು ಡಿಯೊಗೊ ಮತ್ತು ಆಂಡ್ರೆಯ ಕುಟುಂಬ, ಸ್ನೇಹಿತರು, ತಂಡದ ಸಹ ಆಟಗಾರರು ಮತ್ತು ಕ್ಲಬ್ ಸಿಬ್ಬಂದಿಯ ಗೌಪ್ಯತೆಯನ್ನು ಗೌರವಿಸಬೇಕೆಂದು ವಿನಂತಿಸುತ್ತದೆ. ಊಹಿಸಲಾಗದ ನಷ್ಟವನ್ನು ಅವರು ಎದುರಿಸಲು ನಾವು ನಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ ಎಂದು ಹೇಳಿದೆ.
Advertisement