

ಬೆಂಗಳೂರು: ಭಾರತೀಯ ಪುರುಷರ ಹಾಕಿ ತಂಡದ ಮಾಜಿ ಗೋಲ್‌ಕೀಪರ್ ಮತ್ತು 1972 ರ ಮ್ಯೂನಿಚ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತ ತಂಡದ ಸದಸ್ಯ ಮ್ಯಾನುಯೆಲ್ ಫ್ರೆಡೆರಿಕ್ ಅವರು ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ.
ಫ್ರೆಡೆರಿಕ್ ಅವರಿಗೆ 78 ವರ್ಷ ವಯಸ್ಸಾಗಿತ್ತು ಮತ್ತು ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಕಳೆದ 10 ತಿಂಗಳಿನಿಂದ ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಫ್ರೆಡೆರಿಕ್ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.
ಅಕ್ಟೋಬರ್ 20, 1947 ರಂದು ಕಣ್ಣೂರಿನ ಬರ್ನಸ್ಸೇರಿಯಲ್ಲಿ ಜನಿಸಿದ ಫ್ರೆಡೆರಿಕ್, ಒಲಿಂಪಿಕ್ ಪದಕ ಗೆದ್ದ ಕೇರಳದ ಮೊದಲ ಕ್ರೀಡಾಪಟು ಎಂಬ ಗೌರವಕ್ಕೆ ಪಾತ್ರರಾಗಿದ್ದರು.
ಬಹಳ ದಿನಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಫ್ರೆಡೆರಿಕ್ ಅವರ ಪತ್ನಿ ಶೀತಲಾ ಒಂದು ವರ್ಷದ ಹಿಂದೆ ನಿಧನರಾದ ನಂತರ ಅವರು ಖಿನ್ನತೆಯಿಂದ ಬಳಲುತ್ತಿದ್ದರು.
"ಅಪ್ಪ ಇಂದು ಬೆಳಗ್ಗೆ ನಿಧನರಾದರು. ಅವರು ಕಳೆದ 10 ತಿಂಗಳುಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಮತ್ತು ನಮ್ಮ ತಾಯಿ ಒಂದು ವರ್ಷದ ಹಿಂದೆ ನಿಧನರಾದ ನಂತರ ಖಿನ್ನತೆಗೆ ಒಳಗಾಗಿದ್ದರು" ಎಂದು ಅವರ ಮಗಳು ಫ್ರೆಶ್ನಾ ಪಿಟಿಐಗೆ ತಿಳಿಸಿದ್ದಾರೆ.
ಕೇರಳದ ಕಣ್ಣೂರು ಜಿಲ್ಲೆಯವರಾದ ಫ್ರೆಡೆರಿಕ್, 1972ರ ಮ್ಯೂನಿಚ್ ಒಲಿಂಪಿಕ್ಸ್ ಹಾಕಿ ಕ್ರೀಡೆಯಲ್ಲಿ ಹಾಲೆಂಡ್ ಮಣಿಸಿ ಕಂಚಿನ ಪದಕ ಗೆದ್ದ ಭಾರತೀಯ ತಂಡದ ಗೋಲ್‌ಕೀಪರ್ ಆಗಿದ್ದರು. ಏಳು ವರ್ಷಗಳ ಕಾಲ ಭಾರತ ತಂಡದ ಪರ ಆಡಿದ್ದ ಅವರಿಗೆ 2019ರಲ್ಲಿ ಧ್ಯಾನ್ ಚಂದ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
Advertisement